ಈ ಹಿನ್ನೆಲೆಯಲ್ಲಿ, ಸಾಮಾಜಿಕ ಕಾರ್ಯಕರ್ತರಾದ ಅಂಜಲಿ ಭಾರದ್ವಾಜ್, ಅಶೋಕ್ ಶರ್ಮ, ಶಬ್ನಮ್ ಹಶ್ಮಿ, ನವಶರಣ್ ಸಿಂಗ್ ಮತ್ತು ಅಮೃತಾ ಜೋಹ್ರಿ ಅವರು ಚುನಾವಣಾ ಆಯುಕ್ತರನ್ನು ಭೇಟಿಯಾಗಿ, 4,000ಕ್ಕೂ ಹೆಚ್ಚು ಜನರ ಸಹಿ ಇರುವ ಮನವಿ ಪತ್ರವನ್ನು ಅವರಿಗೆ ನೀಡಿದ್ದಾರೆ.
ಫಾರ್ಮ್- 17ಸಿ ಭಾಗ- 1ರಲ್ಲಿ (ಮತ ದಾಖಲಾತಿ ಪ್ರಕಟಣೆ) ಮತ ಚಲಾವಣೆಯಾದ ನಿಖರ ದಾಖಲೆಗಳನ್ನು ಪ್ರಕಟಿಸಬೇಕು ಎಂದು ಆಗ್ರಹಿಸಿರುವ ಅವರು, ಮತ ಪ್ರಮಾಣ ಪ್ರಕಟಿಸುವಲ್ಲಿ ಆಯೋಗವು ಭಾರಿ ವಿಳಂಬ ಮಾಡಿದ್ದರ ಕುರಿತು ಮತ್ತು ಪರಿಷ್ಕೃತ ಮತಪ್ರಮಾಣದಲ್ಲಿ ಶೇ 6ರಷ್ಟು ಮತ ಹೆಚ್ಚಳವಾಗಿದ್ದರ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮತ ಪ್ರಮಾಣದಲ್ಲಿ ವ್ಯತ್ಯಾಸ ಕಂಡುಬಂದಿದ್ದರಿಂದ ಜನರಲ್ಲಿ ಆಯೋಗದ ಬಗ್ಗೆ ಅಪನಂಬಿಕೆ ಮೂಡುವಂತಾಗಿದೆ ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.
ಏಪ್ರಿಲ್ 19ರಂದು ಮೊದಲ ಹಂತದ ಮತದಾನ ನಡೆಯಿತು. ಒಟ್ಟು ಶೇ 60ರಷ್ಟು ಮತದಾನ ನಡೆದಿದೆ ಎಂದು ಅದೇ ದಿನ ಸಂಜೆ ಆಯೋಗವು ಪ್ರಕಟಣೆ ಹೊರಡಿಸಿತ್ತು. ಆದರೆ, 11 ದಿನಗಳ ಬಳಿಕ ಪರಿಷ್ಕೃತ ಮತ ಪ್ರಮಾಣ ಬಿಡುಗಡೆ ಮಾಡಿದ ಆಯೋಗವು, ಶೇ 66.71ರಷ್ಟು ಮತದಾನ ಆಗಿದೆ ಎಂದು ಪ್ರಕಟಣೆ ಹೊರಡಿಸಿತು.
ಈ ಹಿನ್ನೆಲೆಯಲ್ಲಿ ಮೊದಲ ಮೂರು ಹಂತಗಳ ಮತದಾನ ನಡೆದ ಎಲ್ಲಾ ಮತಗಟ್ಟೆಗಳಲ್ಲಿ ದಾಖಲಾದ ಮತ ಪ್ರಮಾಣವನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು. ಮುಂದಿನ ಹಂತಗಳ ಮತದಾನದ ಮಾಹಿತಿಯೂ ಮತದಾನ ನಡೆದ 48 ಗಂಟೆಯೊಳಗೆ ಸಾರ್ವಜನಿಕರಿಗೆ ದೊರಕುವಂತೆ ಮಾಡಬೇಕು ಎಂದು ಕಾರ್ಯಕರ್ತರ ತಂಡವು ಮನವಿಪತ್ರದಲ್ಲಿ ಹೇಳಿದೆ.
ಪ್ರತಿ ಮತಗಟ್ಟೆಯಲ್ಲಿ ದಾಖಲಾದ ಮತ ಪ್ರಮಾಣವನ್ನು ಮತದಾನ ನಡೆದ 48 ಗಂಟೆಗಳಲ್ಲಿ ಪ್ರಕಟಿಸುವಂತೆ ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಅಸೋಸಿಯೇಷನ್ ಫಾರ್ ಡೆಮಾಕ್ರೆಟಿಕ್ ರೆಫಾರ್ಮ್ಸ್ (ಎಡಿಆರ್) ಎಂಬ ಸಂಸ್ಥೆ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಮೇ 17ರಂದು ನಡೆಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.