ಪತ್ತನಂತಿಟ್ಟ: ಶಬರಿಮಲೆ ಸೇರಿದಂತೆ ದೇಗುಲಗಳ ಗರ್ಭಗುಡಿಯಲ್ಲಿ ಬಳಕೆಯಾಗದಿರುವ ಹಳೆಯ ಪೂಜಾ ಪರಿಕರಗಳು ಹಾಗೂ ಇತರ ಸಾಮಗ್ರಿಗಳನ್ನು ಹರಾಜು ಹಾಕಿ ಮಾರಾಟ ಮಾಡಲು ದೇವಸ್ವಂ ಮಂಡಳಿ ನಿರ್ಧರಿಸಿದೆ.
ಅವು ಹಳೆಯವಾಗಿದ್ದರೂ ದುಬಾರಿ ಬೆಲೆಯದ್ದಾಗಿವೆ. ಸಣ್ಣ ಮತ್ತು ಮಧ್ಯಮ ದೇವಾಲಯಗಳಿಗೆ ಹಣ ಸಂಗ್ರಹಿಸಲು ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿದುಬಂದಿದೆ. ಹಣದ ಕೊರತೆಯಿಂದ ಸಣ್ಣ ಮತ್ತು ಮಧ್ಯಮ ದೇವಾಲಯಗಳ ನಿರ್ವಹಣೆ ಮತ್ತು ಅಭಿವೃದ್ಧಿ ಕಾಮಗಾರಿಗಳು ಕುಂಠಿತಗೊಳ್ಳುವ ಪರಿಸ್ಥಿತಿಯನ್ನು ತಪ್ಪಿಸುವುದು ಉದ್ದೇಶ ಎನ್ನಲಾಗಿದೆ.
ಇಂತಹ ಹರಾಜು ನಡೆಯುತ್ತಿರುವುದು ಇದೇ ಮೊದಲು. ಈ ಮೂಲಕ ಉತ್ತಮ ಮೊತ್ತ ಸಂಗ್ರಹಿಸಬಹುದು ಎಂದು ದೇವಸ್ವಂ ಮಂಡಳಿ ಅಂದಾಜಿಸಿದೆ. ಅದೇ ರೀತಿ ಶಬರಿಮಲೆ ಸೇರಿದಂತೆ ದೇವಸ್ಥಾನಗಳ ಆವರಣದಲ್ಲಿ ರಾಶಿ ಹಾಕಿರುವ ಟನ್ ಗಟ್ಟಲೆ ವಿದ್ಯುತ್ ಉಪಕರಣಗಳು ಹಾಗೂ ಕುರ್ಚಿಗಳನ್ನು ಹರಾಜು ಹಾಕಲಾಗುತ್ತದೆ. ಈ ಕ್ರೋಢೀಕರಿಸಿದ ವಸ್ತುಗಳನ್ನು ಸ್ಥಳಾಂತರಿಸಿದ ನಂತರ, ಜಾಗವನ್ನು ಇತರ ಉದ್ದೇಶಗಳಿಗಾಗಿ ಬಳಸಬಹುದು ಎನ್ನಲಾಗಿದೆ.
ಆದರೆ, ದೇವಾಲಯಗಳ ಹಳೆ ಪೂಜಾ ಸಾಮಗ್ರಿಗಳ ಮಾರಾಟದ ಹಿಂದೆ ಕುತ್ಸಿತ ಮನೋಸ್ಥಿತಿ ಇದೆ ಎನ್ನಲಾಗಿದೆ. ದೇವಾಲಯಗಳ ಪ್ರಾಚೀನತೆ, ಮಹತ್ವಿಕೆಗಳ ಸಾಕ್ಷಿಗಳಾಗುವ ಇಂತಹ ಹಳೆಯ ಸಾಮಗ್ರಿಗಳ ಸ್ಥಳಾಂತರ ದೇವಾಲಯಗಳ ಹಿರಿಮೆಯನ್ನು ಸಾರುವವುಗಳಾಗಿವೆ. ಅವೇ ಇಲ್ಲವೆಂದಾದರೆ ಸಾಕ್ಷಿ ಕೊರತೆಗಳ ಹೆಸರಲ್ಲಿ ಮುಂದೆ ಏನುಬೇಕಾದರೂ ಮಾಡುವ ಹುನ್ನಾರತೆಗಳಿಗೆ ದಾರಿಯಾಗಲಿವೆ. ಅಲ್ಲದೆ ಹಳೆ ವಸ್ತುಗಳ ಮಾರಾಟ ಜಾಲ(ಪ್ರಾಚ್ಯವಸ್ತು ಮಾಫಿಯಾ) ಇದರ ಹಿಂದಿದೆ ಎನ್ನಲಾಗಿದೆ.