ನವದೆಹಲಿ: ಇಸ್ರೇಲ್‌ನ ಟೆಲ್ ಅವಿವ್ ವಿಶ್ವವಿದ್ಯಾಲಯದ ಜೊತೆಗೆ ಶೈಕ್ಷಣಿಕ ಮತ್ತು ಸಂಶೋಧನೆಗೆ ಸಂಬಂಧಿಸಿ ಆಗಿರುವ ಒಪ್ಪಂದಗಳನ್ನು ರದ್ದುಪಡಿಸಬೇಕು ಎಂದು ಹರಿಯಾಣದ ಅಶೋಕ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.
ಈ ಸಂಬಂಧ ವಿದ್ಯಾರ್ಥಿ ಸಂಘಟನೆಯು ಕುಲಪತಿಗೆ ಪತ್ರ ಬರೆದಿದೆ.
ಗಾಜಾ ಯುದ್ಧ ಮತ್ತು ಮಾನವ ಹಕ್ಕುಗಳ ಉಲ್ಲಂಘನೆ ಹಿನ್ನೆಲೆಯಲ್ಲಿ ಈ ಕ್ರಮ ಅಗತ್ಯ ಎಂದು ಒತ್ತಾಯಿಸಿದೆ. ಗಾಜಾ ಯುದ್ಧದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗೆ ಈ ಮೂಲಕ ದನಿಗೂಡಿಸಿದೆ.ಪ್ಯಾಲೆಸ್ಟೀನ್‌ನಲ್ಲಿ ನಡೆಯುತ್ತಿರುವ ನರಮೇಧ ತೀವ್ರ ಕಳವಳಕಾರಿಯಾಗಿದೆ. ಗಾಜಾ ಮೇಲಿನ ಇಸ್ರೇಲ್ ಯುದ್ಧದಿಂದಾಗಿ ಈವರೆಗೆ ಸುಮಾರು 34,596 ಜನರು ಅಸುನೀಗಿದ್ದಾರೆ. ಸುಮಾರು 77,816 ಜನರು ಗಾಯಗೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ ಇಸ್ರೇಲ್ ವಿಶ್ವವಿದ್ಯಾಲಯಗಳ ಜೊತೆಗಿನ ಒಪ್ಪಂದದ ರದ್ದತಿಗೆ ಒತ್ತಾಯಿಸಿ ವಿವಿಧ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳಿಂದ ಪ್ರತಿಭಟನೆ ನಡೆದಿದೆ. ಇದಕ್ಕೆ ಈಗ ಅಶೋಕ ವಿಶ್ವವಿದ್ಯಾಲಯ ವಿದ್ಯಾರ್ಥಿಗಳೂ ಕೈಜೋಡಿಸಿದ್ದಾರೆ.
ಅಶೋಕ ವಿಶ್ವವಿದ್ಯಾಲಯವು ಟೆಲ್ ಅವಿವ್ ವಿಶ್ವವಿದ್ಯಾಲಯದ ಜೊತೆಗೆ ಬೋಧನೆ, ವಿದ್ಯಾರ್ಥಿ ನಿವಿಮಯ, ಸಂಶೋಧನೆ, ಅಲ್ಪಾವಧಿ ಅಧ್ಯಯನ, ಜಂಟಿ ಕಾರ್ಯಕ್ರಮ ಕುರಿತಂತೆ ಒಪ್ಪಂದ ಮಾಡಿಕೊಂಡಿದೆ ಎಂದು ವಿದ್ಯಾರ್ಥಿ ಸಂಘಟನೆ ತಿಳಿಸಿದೆ.