ಮಂಜೇಶ್ವರ: ಮಂಜೇಶ್ವರ ಪಂಚಾಯತಿ 2 ನೇ ವಾರ್ಡ್ ವ್ಯಾಪ್ತಿಯ ತೂಮಿನಾಡು ಪರಿಶಿಷ್ಟ ಜಾತಿ ಕಾಲನಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದೆ. ಮೂರು ಕೊಳವೆ ಬಾವಿಗಳಿಂದ ನೀರು ವಿತರಿಸಲಾಗುತ್ತಿತ್ತು. ಬೇಸಿಗೆ ತೀವ್ರಗೊಂಡ ಹಿನ್ನೆಲೆಯಲ್ಲಿ ಇಲ್ಲಿ ಒಂದು ಬಾವಿಯಲ್ಲಿ ನೀರು ಬತ್ತಿದೆ. ಆದರೆ ನೀರು ಲಭಿಸುತ್ತಿದ್ದ ಇನ್ನೊಂದು ಬಾವಿಯ ಮೋಟಾರ್ ಹಾನಿಯಾಗಿ ಇದುವರೆಗೂ ದುರಸ್ತಿಗೊಳಿಸಲು ಕ್ರಮ ಕೈಗೊಂಡಿಲ್ಲವೆಂದು ಸ್ಥಳೀಯರು ಆರೋಪಿಸಿದ್ದಾರೆ. ಉಳಿದ ಒಂದು ಬಾವಿಯಿಂದ ಲಭಿಸುತ್ತಿರುವ ನೀರನ್ನು ಈಗ ವಿತರಿಸಲಾಗುತ್ತಿದ್ದು, ಆದರೆ ಇದು ಎಲ್ಲಾ ಸ್ಥಳಗಳಿಗೂ ಸಾಕಾಗುವುದಿಲ್ಲವೆಂದು ಕಾಲನಿ ನಿವಾಸಿಗಳು ಹೇಳುತ್ತಿದ್ದಾರೆ. ಹಾನಿಯಾದ ಮೋಟರನ್ನು ದುರಸ್ತಿಗೊಳಿಸಿ ಅಗತ್ಯಕ್ಕೆ ನೀರು ಲಭ್ಯಗೊಳಿಸುವಂತೆ ಮಾಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಈ ಬಗ್ಗೆ ಮಂಜೇಶ್ವರ ಕನ್ಸ್ಯೂಮರ್ ಸೊಸೈಟಿ ಜಲ ಪ್ರಾಧಿಕಾರಕ್ಕೆ ದೂರು ನೀಡಿದೆಯಾದರೂ ಇದುವರೆಗೂ ಕ್ರಮ ತೆಗೆದುಕೊಂಡಿಲ್ಲವೆಂದು ಪದಾಧಿಕಾರಿಗಳು ತಿಳಿಸಿದ್ದಾರೆ. ತೀವ್ರ ಬೇಸಿಗೆಯಲ್ಲಿ ಕುಡಿಯುವ ನೀರಿನ ಕೊರತೆ ಹೆಚ್ಚಾಗಿರವುದರಿಂದ ಕುಂಜತ್ತೂರು, ತೂಮಿನಾಡು ಭಾಗಗಳಲ್ಲಿನ ಜನರು ಸಂಕಷ್ಟದಲ್ಲಿದ್ದಾರೆ. ನೀರು ಕ್ಷಾಮವಿರುವ ಸ್ಥಳಗಳಿಗೆ ಅಧಿಕಾರಿಗಳು ವಾಹನದಲ್ಲಿ ತಲುಪಿಸಬೇಕೆಂದು ಆಗ್ರಹಿಸಲಾಗಿದೆ.