ಬದಿಯಡ್ಕ: ಶಂಕರಾಚಾರ್ಯರು ಕೇರಳದ ಕಾಲಡಿಯಲ್ಲಿ ಜನಿಸಿ ಉತ್ತರದ ಹಿಮಾಲಯದ ತನಕ ಸಂಚರಿಸಿ ಕಾಶ್ಮೀರದಲ್ಲಿ ಸರ್ವಜ್ಞ ಪೀಠವನ್ನಲಂಕರಿಸಿದ ಮಹಾಮೇಧಾವಿ. 8ನೇ ಶತಮಾನದಲ್ಲಿ ವೈದಿಕ ಧರ್ಮವನ್ನು ಪುನರುತ್ಥಾನಗೊಳಿಸಿದ ದಾರ್ಶನಿಕ. ಮಠಸಂಪ್ರದಾಯವನ್ನು ಜಾರಿಗೆ ತಂದ ಪುಣ್ಯಪುರುಷ ಎಂದು ನಿವೃತ್ತ ಮುಖ್ಯೋಪಾಧ್ಯಾಯ ವಿದ್ವಾನ್ ಪರಮೇಶ್ವರ ಹೆಗಡೆ ಹೇಳಿದರು.
ಶ್ರೀಶಂಕರ ಜಯಂತಿ ಪ್ರಯುಕ್ತ ಬ್ರಹ್ಮಶ್ರೀ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ಟ ಸಂಪ್ರತಿಷ್ಠಾನ ಇವರ ನೇತೃತ್ವದಲ್ಲಿ ಕಾಸರಗೋಡು ಹೊಸದುರ್ಗ ಹೈವ ಬ್ರಾಹ್ಮಣ ಸಭಾದ ಆಶ್ರಯದಲ್ಲಿ ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಲ್ಲಿ ಶ್ರೀ ವಸಂತ ವೇದಪಾಠ ಶಿಬಿರದಲ್ಲಿ ಜರಗಿದ ಶಂಕರ ಜಯಂತಿ ಕಾರ್ಯಕ್ರಮದಲ್ಲಿ ಪ್ರಧಾನ ಉಪನ್ಯಾಸವನ್ನು ನೀಡಿ ಅವರು ಮಾತನಾಡಿದರು.
ಅಖಂಡ ಭಾರತವನ್ನು ಧಾರ್ಮಿಕವಾಗಿ ಏಕೀಕರಣಗೊಳಿಸಿದ ಮಹಾನುಭಾವ ಶಂಕರಾಚಾರ್ಯರು. ಅಂತಹ ಸತ್ಪುರುಷರಿಂದ ಭಾರತವು ಧಾರ್ಮಿಕವಾಗಿ ಶ್ರೀಮಂತವಾಗಿದೆ ಎಂದರು.
ಮುಳ್ಳೇರಿಯ ಹವ್ಯಕ ಮಂಡಲ ವಿದ್ಯಾರ್ಥಿವಾಹಿನಿ ಪ್ರಮುಖ ಶ್ಯಾಮಪ್ರಸಾದ ಕುಳಮರ್ವ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಪಂಚಕ್ಕೆ ಜ್ಞಾನಬೆಳಕನ್ನು ನೀಡಿದ ಶಂಕರಾಚಾರ್ಯರಿಂದ ಭಾರತೀಯರಾದ ನಮಗೆ ಅತಿ ಮಹತ್ವವಾದ ವಿದ್ಯೆಗಳನ್ನು ಕಲಿಯುವ ಅವಕಾಶ ಲಭ್ಯವಾಗಿದೆ. ಅಂತಹ ಆದಿಗುರು ಶಂಕರಾಚಾರ್ಯರ ನಡೆಯಲ್ಲಿ ನಾವು ಮುನ್ನಡೆಯಬೇಕಾಗಿದೆ ಎಂದರು.
ವೇದಮೂರ್ತಿ ಪಟ್ಟಾಜೆ ವೆಂಕಟೇಶ್ವರ ಭಟ್ ಶುಭಾಶಂಸನೆಗೈದರು. ವೇದಪಾಠ ಶಿಬಿರದ ಅಧ್ಯಾಪಕ ಮುರಲೀಧರ ಶರ್ಮಾ ಅಳಕ್ಕೆ, ನಿವೃತ್ತ ಮುಖ್ಯೋಪಾಧ್ಯಾಯ ಈಶ್ವರ ಭಟ್ ಪೆರ್ಮುಖ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಪ್ರತಿಷ್ಠಾನದ ಆಡಳಿತ ಮಂಡಳಿ ಸದಸ್ಯ ಶ್ರೀಧರ ಭಟ್ ಸ್ವಾಗತಿಸಿ, ಕಾಸರಗೋಡು ಹೊಸದುರ್ಗ ಹೈವ ಬ್ರಾಹ್ಮಣ ಸಭಾದ ಕೋಶಾಧಿಕಾರಿ ವೈ.ಕೆ.ಗೋವಿಂದ ಭಟ್ ವಂದಿಸಿದರು. ಸಂಪ್ರತಿಷ್ಠಾನದ ಕೋಶಾಧಿಕಾರಿ ತಿರುಮಲೇಶ್ವರ ಭಟ್ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಸಂಪ್ರತಿಷ್ಠಾನದ ವತಿಯಿಂದ ವೇದಶಿಬಿರಕ್ಕೆ ಧನಸಹಾಯ ನೀಡಲಾಯಿತು. ಹಿರಿಯರಾದ ಟಿ.ಕೆ.ನಾರಾಯಣ ಭಟ್, ಶ್ಯಾಮಪ್ರಸಾದ ಕಬೆಕ್ಕೋಡು, ವೇದಶಿಬಿರದ ಅಧ್ಯಾಪಕರುಗಳಾದ ಮಹಾಗಣಪತಿ ಅಳಕ್ಕೆ, ಸುಬ್ರಹ್ಮಣ್ಯ ಪ್ರಸಾದ ನೀರ್ಚಾಲು, ವೇದವಿದ್ಯಾರ್ಥಿಗಳ ಪಾಲಕರು ಪಾಲ್ಗೊಂಡಿದ್ದರು.