ಕೊಚ್ಚಿ: ನಟಿ ನವ್ಯಾ ನಾಯರ್ ಬಗ್ಗೆ ಕನ್ನಡಿಗರಿಗೆ ಹೆಚ್ಚಿಗೆ ಹೇಳುವ ಅಗತ್ಯವಿಲ್ಲ. ನಟ ದರ್ಶನ್ ಅಭಿನಯದ ಸೂಪರ್ ಹಿಟ್ ಗಜ ಸಿನಿಮಾದ ಮೂಲಕ ಕನ್ನಡಿಗರಿಗೆ ಪರಿಚಿತರಾಗಿದ್ದಾರೆ. ಅಲ್ಲದೆ, ನಮ್ಮೆಜಮಾನ್ರು, ಭಾಗ್ಯದ ಬಳೆಗಾರ, ಬಾಸ್ ಹಾಗೂ ದೃಶ್ಯ 1 ಮತ್ತು 2 ಸಿನಿಮಾಗಳಲ್ಲಿ ನಟಿಸುವ ಮೂಲಕ ಕನ್ನಡಿಗರಿಗೆ ತುಂಬಾ ಹತ್ತಿರವಾಗಿದ್ದಾರೆ.
ತಾಜಾ ಸಂಗತಿ ಏನೆಂದರೆ, ನವ್ಯಾ ನಾಯರ್ ಅವರು ವೇದಿಕೆ ಮೇಲೆಯೇ ಕಣ್ಣೀರಾಕಿದ್ದಾರೆ. ಅದಕ್ಕೆ ಕಾರಣ ಅವರ ಕುಟುಂಬದ ಬಗ್ಗೆ ಕಾರ್ಯಕ್ರಮದ ಆಯೋಜಕರು ನೀಡಿರುವ ತಪ್ಪು ಮಾಹಿತಿ. ತಪ್ಪು ಮಾಹಿತಿಯನ್ನು ಸರಿಪಡಿಸುವಂತೆ ಕಾರ್ಯಕ್ರಮದ ಆಯೋಜಕರನ್ನು ನವ್ಯಾ ನಾಯರ್ ಪ್ರಶ್ನೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ನಾನು ನಿಮಗೊಂದನ್ನು ಹೇಳಲು ಬಯಸುತ್ತೇನೆ. ನಾನು ಇಲ್ಲಿರುವ ಬುಕ್ಲೆಟ್ ಅನ್ನು ನೋಡಿದೆ. ಅದರಲ್ಲಿ ನನಗೆ ಇಬ್ಬರು ಮಕ್ಕಳಿದ್ದಾರೆ ಎಂದು ಬರೆಯಲಾಗಿದೆ. ಇದನ್ನು ನೋಡಿ ನನ್ನ ತಾಯಿ ಯೋಚಿಸುವುದಿಲ್ಲವೇ? ಮತ್ತು ನನ್ನ ಕುಟುಂಬವು ಸಹ ಈ ಬಗ್ಗೆ ಚಿಂತಿಸುವುದಿಲ್ಲವೇ? ಈ ಬಗ್ಗೆ ನಿಮಗೆ ಅರಿವಿಲ್ಲವೇ? ನನಗೆ ಯಮಿಕಾ ಹೆಸರಿನ ಮಗಳಿದ್ದಾಳೆ ಎಂದು ಬುಕ್ಲೆಟ್ನಲ್ಲಿ ಬರೆಯಲಾಗಿದೆ. ಆದರೆ, ನನಗಿರುವುದು ಒಬ್ಬನೇ ಮಗ. ಈ ವಿಚಾರ ಅನೇಕರಿಗೆ ತಿಳಿದಿದೆ. ನೀವು ಈ ರೀತಿ ತಪ್ಪು ಮಾಹಿತಿ ಕೊಟ್ಟರೆ ಜನರು ನನ್ನ ಬಗ್ಗೆ ತಪ್ಪು ತಿಳಿದುಕೊಳ್ಳುವುದಿಲ್ಲವೇ ಎಂದು ನವ್ಯಾ ನಾಯರ್ ಆಕ್ರೋಶ ಹೊರಹಾಕಿದ್ದಾರೆ.
ಈ ರೀತಿಯ ವಿಷಯಗಳನ್ನು ಬರೆಯುವಾಗ ದಯವಿಟ್ಟು ಊಹಿಸಬೇಡಿ. ಎಲ್ಲ ಮಾಹಿತಿಗಳು ವಿಕಿಪೀಡಿಯಾದಲ್ಲಿ ಸುಲಭವಾಗಿ ಲಭ್ಯವಿವೆ. ಅತಿಥಿಗಳನ್ನು ಆಹ್ವಾನಿಸುವಾಗ, ಅವರ ಬಗ್ಗೆ ನಿಖರವಾದ ಮಾಹಿತಿಯನ್ನು ಬರೆಯಿರಿ ಎಂದು ಕಾರ್ಯಕ್ರಮದ ಆಯೋಜಕರನ್ನು ನವ್ಯಾ ನಾಯರ್ ತರಾಟೆಗೆ ತೆಗೆದುಕೊಂಡರು.
ಇನ್ನೂ ಬುಕ್ಲೆಟ್ನಲ್ಲಿ ನಾನು ನಟಿಸದ ಕೆಲವು ಚಿತ್ರಗಳನ್ನು ಉಲ್ಲೇಖಸಲಾಗಿದೆ. ಇದನ್ನು ಬೇಕಾದರೆ ಪಾಸಿಟಿವ್ ಆಗಿ ತೆಗೆದುಕೊಳ್ಳಬಹುದು. ಆದರೆ, ಮಗುವಿನ ವಿಷಯದಲ್ಲಿ ತಪ್ಪು ಮಾಹಿತಿಯನ್ನು ಸಹಿಸಲಾಗದು. ಆದರೂ ನನ್ನನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಕ್ಕೆ ನನಗೆ ತುಂಬಾ ಖುಷಿಯಾಗಿದೆ ಎಂದು ನವ್ಯಾ ನಾಯರ್ ಹೇಳಿದ್ದಾರೆ.