ಕಾಸರಗೋಡು: ಜಿಲ್ಲಾದ್ಯಂತ ಸುರಿದ ಬೇಸಿಗೆ ಮಳೆ, ಬಿಸಿಲ ಬೇಗೆಯಿಂದ ಬಳಲುತ್ತಿದ್ದ ಜನತೆಗೆ ತಂಪೆರೆದರೂ, ರಾಷ್ಟ್ರೀಯ ಹೆದ್ದಾರಿ ಷಟ್ಪಥ ಯೋಜನೆ ಕಾಮಗಾರಿ ನಡೆಯುತ್ತಿರುವ ಪ್ರದೇಶದ ಜನರು ಹಾಗೂ ವ್ಯಾಪಾರಿಗಳು ಭಾರೀ ಸಂಕಷ್ಟ ಅನುಭವಿಸಬೇಕಾಯಿತು. ಚೆರ್ಕಳ ಪೇಟೆಯಲ್ಲಿ ಮಳೆನೀರು ಸಾಗಾಟಕ್ಕೆ ಸಮರ್ಪಕ ಚರಂಡಿ ವ್ಯವಸ್ಥೆಯಿಲ್ಲದೆ ಅಂಗಡಿ ಮುಂಗಟ್ಟುಗಳಿಗೂ ಕೊಳಚೆ ನೀರು ನುಗ್ಗಿತ್ತು. ರಸ್ತೆಕಾಮಗಾರಿ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಕೆಲವು ಪ್ರದೇಶಗಳಲ್ಲಿ ನಿಲ್ಲಿಸಿದ್ದ ವಾಹನಗಳು ಕೆಸರಿನಲ್ಲಿ ಹೂತುಕೊಂಡಿತ್ತು. ಹರಸಾಹಸದಿಂದ ಕೆಲವು ವಾಃನಗಳನ್ನು ನೀರಿನಿಂದ ಮೇಲಕ್ಕೆತ್ತಲಾಯಿತು. ತಲಪ್ಪಾಡಿಯಿಂದ ಕಾಸರಗೋಡು-ಕಣ್ಣೂರು ಜಿಲ್ಲೆಯ ಗಡಿ ಪ್ರದೇಶ ವರೆಗೂ ರಸ್ತೆ ಕಾಮಗಾರಿ ನಡೆಯುವ ಬಹುತೇಕ ಪ್ರದೇಶದಲ್ಲಿ ಮಳೆನೀರು ಸಾಗಾಟಕ್ಕೆ ಸೂಕ್ತ ವ್ಯವಸ್ಥೆಯಿಲ್ಲದೆ ಭಾರೀ ಸಮಸ್ಯೆ ಎದುರಾಗಿತ್ತು. ಬೇಸಿಗೆ ಮಳೆ ಸುರಿಯುವ ಬಗ್ಗೆ ಮುಂಜಾಗ್ರತಾ ಕ್ರಮ ಕೈಗೊಳ್ಳದಿರುವುದರಿಂದ ಹೆಚ್ಚಿನ ಸಮಸ್ಯೆ ಎದುರಾಗಿತ್ತು.
ಜಿಲ್ಲಾದ್ಯಂತ ಭಾನುವಾರ ಸಂಜೆಯಿಂದಲೇ ಮೋಡ ಕವಿದ ವಾತಾವರಣ ಆರಂಭಗೊಂಡಿದ್ದು, ಇದು ಸೋಮವಾರದ ವರೆಗೂ ಮುಂದುವರಿದಿತ್ತು. ಸೋಮವಾರ ನಸುಕಿಗೆ ಗುಡುಗು, ಮಿಂಚಿನಿಂದ ಕೂಡಿದ ಸಾಮಾನ್ಯ ಮಳೆಯಾಗಿದೆ.
ಭಾರೀ ಮಳೆ-ಸೂಚನೆ:
ಕೇರಳದಲ್ಲಿ ಸೋಮವಾರ ರಾತ್ರಿಯಿಂದ ಬೇಸಿಗೆ ಮಳೆಯಾಗಲಿದ್ದು, ಇದು ಮುಂದಿನ ಹತ್ತು ದಿವಸಗಳ ಕಾಲ ಮುಂದುವರಿಯುವ ಸಾಧ್ಯತೆ ಬಗ್ಗೆ ಹವಾಮಾನ ಇಲಾಖೆ ಸೂಚನೆ ನೀಡಿದೆ. ುತ್ತರ ಕೇರಳದಲ್ಲಿ ಮೇ 8ರಿಂದ ಬಿರುಸಿನ ಮಳೆಯಾಗುವ ಸಾಧ್ಯತೆಯಿದೆ ಎಂದೂ ಹವಾಮಾನ ಇಲಾಖೆ ತಿಳಿಸಿದೆ. ಜಿಲ್ಲೆಯ ನಾನಾ ಕಡೆ ವಿದ್ಯುತ್ ಪೂರೈಕೆ ಅಸ್ತವ್ಯಸ್ತಗೊಂಡಿದೆ.
ಸಿಡಿಲಿನ ಆಘಾತ-ಗಾಯ:
ಬದಿಯಡ್ಕ ಪಂಚಾಯಿತಿ ಮಾನ್ಯ ಮೇಗಿನಡ್ಕ ನಿವಾಸಿ ನಾರಾಯಣ ನಾಯ್ಕ ಎಂಬವರ ಮನೆಗೆ ಸಿಡಿಲಿನ ಆಘಾತದಿಂದ ಹಾನಿ ಸಂಭವಿಸಿದೆ. ಸಿಡಿಲಿನ ಆಘಾತದಿಂದ ನಾರಾಯಣ ನಾಯ್ಕ ಅವರಿಗೂ ಗಾಯಗಳುಂಟಾಗಿದೆ. ಮನೆಯ ಕಿಟಿಕಿ, ಗೋಡೆಗೆ ಹಾನಿ ಉಂಟಾಗಿದೆ. ವಿದ್ಯುತ್ ಮೀಟರ್, ವಯರಿಂಗ್‍ಗೂ ಹಾನಿಯುಂಟಾಗಿದೆ.
ಪೋಟೋ: 1)ಬೇಸಿಗೆ ಮಳೆಗೆ ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಚೆರ್ಕಳ ಪೇಟೆಯಲ್ಲಿ ಮಳೆನೀರಲ್ಲಿ ಸಿಲುಕಿಕೊಂಡ ಕಾರು.
ಪೋಟೋ 2): ಬೇಸಿಗೆ ಮಳೆಗೆ ಚೆರ್ಕಳ ಪೇಟೆಯಲ್ಲಿ ಮಳೆನೀರು ಸಾಗಾಟಕ್ಕೆ ಚರಂಡಿ ವ್ಯವಸ್ಥೆಯಿಲ್ಲದೆ ವ್ಯಾಪಾರಿಗಳು ಸಂಕಷ್ಟ ಎದುರಿಸಿದರು.