ನವದೆಹಲಿ (PTI): ಎಎಪಿ ಸಂಸದೆ ಸ್ವಾತಿ ಮಲಿವಾಲ್ ಅವರ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಬಂಧಿತರಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಆಪ್ತ ಸಹಾಯಕ ಬಿಭವ್ ಕುಮಾರ್ ಅವರು ಅಳಸಿ ಹಾಕಿದ ಐಫೋನ್‌ನಿಂದ ದತ್ತಾಂಶವನ್ನು ಪುನಃ ಪಡೆದುಕೊಳ್ಳುವ ಸಲುವಾಗಿ ಅವರನ್ನು ಮುಂಬೈಗೆ ಕರೆದೊಯ್ಯಲಾಗುತ್ತಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಬಿಭವ್ ಕುಮಾರ್ ಅವರು ತಮ್ಮ ಮೊಬೈಲ್ ಫೋನ್‌ನಲ್ಲಿ ಸಂಪೂರ್ಣ ದತ್ತಾಂಶವನ್ನು ಅಳಸಿ ಹಾಕುವ ಮೊದಲು ಮುಂಬೈನಲ್ಲಿರುವ ಕೆಲವು ವ್ಯಕ್ತಿಗಳಿಗೆ ಅಥವಾ ಬೇರೆ ಉಪಕರಣಗಳಿಗೆ ವರ್ಗಾಯಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಬಿಭವ್ ಬಂಧನದ ನಂತರ ಅವರ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಳ್ಳಲಾಗಿತ್ತು. ಆದರೆ, ಅದನ್ನು 'ಫಾರ್ಮ್ಯಾಟ್' ಮಾಡಿರುವುದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅರವಿಂದ ಕೇಜ್ರಿವಾಲ್ ಅವರ ನಿವಾಸದಲ್ಲಿ ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಬಿಭವ್ ಕುಮಾರ್ ಐದು ದಿನಗಳ ನ್ಯಾಯಾಂಗ ಬಂಧನದಲ್ಲಿದ್ದಾರೆ.