ಮಂಜೇಶ್ವರ : ನೂತನ ಕಾಮಗಾರಿ ನಡೆಯುತ್ತಿರುವ ಷಟ್ಪಥ ರಸ್ತೆಯಲ್ಲಿ ದಿನದಿಂದ ದಿನಕ್ಕೆ ಅಪಘಾತಗಳು ಹೆಚ್ಚಾಗುತ್ತಿದ್ದು, ಸ್ಥಳೀಯರಲ್ಲಿ ಹಾಗೂ ಯಾತ್ರಿಕರಲ್ಲಿ ಆತಂಕ ಹೆಚ್ಚಿಸಿದೆ.
ಸೋಮವಾರ ಬೆಳಿಗ್ಗೆ ಉಪ್ಪಳ ಗೇಟ್ ಸಮೀಪದ ರಾ. ಹೆದ್ದಾರಿಯಲ್ಲಿ ಪ್ರಯಾಣಿಕರನ್ನು ಹೇರಿಕೊಂಡು ಹೋಗುತ್ತಿದ್ದ ಖಾಸಗಿ ಸಫರ್ ಬಸ್ಸು ಹಾಗೂ ಕಾಸರಗೋಡು ಭಾಗದಿಂದ ಮಂಗಳೂರು ಭಾಗಕ್ಕೆ ತೆರಳುತಿದ್ದ ಕಂಟೈನರ್ ಲಾರಿ ಪರಸ್ಪರ ಡಿಕ್ಕಿ ಹೊಡೆದು ಉಂಟಾದ ಅಪಘಾತದಲ್ಲಿ ಬಸ್ಸು ಚಾಲಕ ಉಪ್ಪಳ ನಿವಾಸಿ ಅಶ್ರಫ್ ಹಾಗೂ ಕಂಟೈನರ್ ಚಾಲಕ ಹಾಗೂ ಬಸ್ಸಿನ ಮುಂಭಾಗದಲ್ಲಿದ್ದ ಮೂವರು ಪ್ರಯಾಣಿಕರು ಗಾಯಗೊಂಡಿದ್ದಾರೆ.
ಬಸ್ಸಿನೊಳಗೆ ಸಿಲುಕಿದ್ದ ಚಾಲಕನನ್ನು ಊರವರು ಹರ ಸಾಹಸ ಪಟ್ಟು ಹೊರ ತೆಗೆದಿದ್ದಾರೆ.
ಅಪಘಾತದ ದೃಶ್ಯ ಸಮೀಪದ ಸಿ ಸಿ ಟಿವಿ ಯಲ್ಲಿ ಸೆರೆಯಾಗಿದೆ. ಕಂಟೈನರ್ ಚಾಲಕನ ಅಮಿತ ವೇಗತೆ ಅಪಘಾತಕ್ಕೆ ಕಾರಣವಾಗಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಅಪಘಾತದಿಂದ ಕೆಲ ಸಮಯ ರಾ.ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದ್ದು ಬಳಿಕ ಊರವರು ಹಾಗೂ ಮಂಜೇಶ್ವರ ಪೋಲೀಸರು ಆಗಮಿಸಿ ಸಂಚಾರವನ್ನು ಸುಗಮಗೊಳಿಸಿದರು.