HEALTH TIPS

ಸತ್ತವರ ನೆರಳು: ಡೀಪ್‌ಫೇಕ್‌ ರಿಸರೆಕ್ಷನ್

 ತ್ತವರ ನೆರಳು ಕಾಡುತ್ತದಷ್ಟೆ ಅಲ್ಲ, ಅದು ಕೆಲವು ಕಂಪೆನಿಗಳಿಗೆ ಕಾಸನ್ನೂ ಮಾಡಿಕೊಡಬಹುದು. ಹೌದು, ಸತ್ತವರ ಸುಳ್ಳು ಚಿತ್ರಗಳನ್ನು, ವೀಡಿಯೋಗಳನ್ನು ಮಾಡುವ ವ್ಯಾಪಾರ ಆರಂಭವಾಗಿದೆ. 'ಸಿಲಿಕಾನ್ ಇಂಟೆಲಿಜೆನ್ಸ್' ಎನ್ನುವ ಚೀನೀ ಕಂಪೆನಿಯೊಂದು ಡೀಪ್ ಫೇಕ್ ತಂತ್ರಜ್ಞಾನವನ್ನು ಬಳಸಿ, ಸತ್ತವರಿಗೆ ಮರು ಹುಟ್ಟು ನೀಡುತ್ತಿದೆ.

'ಡೀಪ್‌ಫೇಕ್‌ ರಿಸರೆಕ್ಷನ್' ಎಂದು ಕರೆಯುವ ಈ ತಂತ್ರಜ್ಞಾನವನ್ನು ಬಳಸಿಕೊಂಡು ಸತ್ತವರ ಜೊತೆಗೆ ಅವರು ಇನ್ನೂ ಬದುಕಿಯೇ ಇದ್ದಾರೇನೋ ಎನ್ನುವಂತೆ ಸಂವಾದಿಸಬಹುದು ಎಂದು 'ಎಂಐಟಿ ಟೆಕ್ನಾಲಜಿ ರಿವ್ಯೂ' ಪತ್ರಿಕೆ ವರದಿ ಮಾಡಿದೆ.

'ಡೀಪ್‌ಫೇಕ್‌ ರಿಸರೆಕ್ಷನ್' ಎನ್ನುವುದು ಡೀಪ್ಫೇಕ್ ತಂತ್ರಜ್ಞಾನದ ಇನ್ನೊಂದು ಬಳಕೆ. 'ಡೀಪ್‌ಫೇಕ್‌' ಎಂದರೆ ಗೊತ್ತಿರಬೇಕು - ಸಂಪೂರ್ಣ ಸುಳ್ಳು ಚಿತ್ರ, ಧ್ವನಿಗಳನ್ನು ಸೃಷ್ಟಿಸುವ ತಂತ್ರಜ್ಞಾನ. ಫೇಸ್‌ಬುಕ್‌ನಲ್ಲಿ ಇದರ ಹಲವು ಅವತಾರಗಳನ್ನು ನೀವು ಕಂಡಿರುತ್ತೀರಿ. ನಿಮ್ಮ ಚಿತ್ರವನ್ನು ಕೊಟ್ಟು, ಇನ್ನು ಐವತ್ತು ವರ್ಷಗಳಾದ ನಂತರ ನೀವು ಹೇಗಿರುತ್ತೀರಿ - ಎಂದು ತೋರಿಸುವ ಚಿತ್ರಗಳನ್ನು ಸೃಷ್ಟಿಸಿರುತ್ತೀರಿ. ಅಥವಾ ಹಿಂದಿನ ಜನ್ಮದಲ್ಲಿ ನೀವು ಏನಾಗಿದ್ದಿರಬಹುದು ಎಂದು ಯಾವುದೋ ರಾಜನ ದಿರಸನ್ನು ತೊಡಿಸಿದ ಚಿತ್ರಗಳನ್ನೂ ಗಮನಿಸಿರುತ್ತೀರಿ. ಇತ್ತೀಚೆಗೆ ಕನ್ನಡದ ನಟಿಯೊಬ್ಬಳ ಡೀಪ್‌ಫೇಕ್‌ ವಿಡಿಯೊವೊಂದು ಸುದ್ದಿ ಮಾಡಿತ್ತು. ಅಶ್ಲೀಲವಾದೊಂದು ವೀಡಿಯೋದಲ್ಲಿ ಇದ್ದದ್ದು ತಾನಲ್ಲ, ಅದು ಡೀಫ್ ಫೇಕ್ ತಂತ್ರಜ್ಞಾನದಿಂದ ಸೃಷ್ಟಿಸಿದ ಸುಳ್ಳು ವಿಡಿಯೊ ಎಂದು ಆಕೆ ದೂರಿದ್ದಳು.

ಸಿನಿಮಾದಲ್ಲಿ ಬಳಸುವ ಗ್ರಾಫಿಕ್ಸ್, ಯಾಂತ್ರಿಕ ಬುದ್ಧಿಮತ್ತೆಯ ತಂತ್ರಗಳ ಜೊತೆಗೆ ಒಂದಿಷ್ಟು ಕಲ್ಪನೆ ಬೆರೆತರೆ ಡೀಪ್‌ಫೇಕ್‌ ತಂತ್ರಜ್ಞಾನ ಸಿದ್ಧ. ಅಮಿತಾಭ್ ಬಚ್ಚನ್ನರ ಧ್ವನಿಯಲ್ಲಿ ಕನ್ನಡದ ಕಗ್ಗವನ್ನು ಕೇಳಿಸಬಹುದು. ಅಥವಾ ಅಮಿತಾಭ್ ಬಚ್ಚನ್ನರೇ ಎದುರು ಬಂದು ನಿಂತು ಕಗ್ಗವನ್ನು ಹಾಡಿದಂತೆ ವೀಡಿಯೋ ಮಾಡಬಹುದು. ಆತನದ್ದೇ ಹಾವಭಾವ, ಧ್ವನಿ; ಆದರೆ ಆತನಲ್ಲ. ಹೀಗೆ ಭ್ರಮಾಚಿತ್ರಗಳನ್ನು, ವೀಡಿಯೋಗಳನ್ನು ರೂಪಿಸಬಹುದು. ಈ ಬಗೆಯಲ್ಲಿ ರೋಬಾಟು ಸುದ್ದಿನಿರೂಪಕರನ್ನು ಸೃಷ್ಟಿಸಿದ್ದೂ ಆಗಿದೆ. ಕೆಲವು ತಿಂಗಳ ಹಿಂದೆ ಕನ್ನಡದ ಎಲ್ಲ ಟಿವಿ ಚಾನೆಲ್ಲುಗಳಲ್ಲಿಯೂ ಇಂತಹ ವರ್ಚುವಲ್ ಸುದ್ದಿವಾಚಕಿಯರು, ಸುದ್ದಿಯನ್ನು ಓದಿದ್ದು ನಾವು ಕಂಡಿದ್ದೆವು.

ಕೃತಕ ಬುದ್ಧಿಮತ್ತೆ ಅಥವಾ ಎಐ ತಂತ್ರಜ್ಞಾನದಲ್ಲಿ ಸುಧಾರಣೆಯಾಗುತ್ತಿದ್ದಂತೆ, ಡೀಫ್ಫೇಕ್ ತಂತ್ರಜ್ಞಾನ ಕೂಡ ಸುಧಾರಿಸಿದೆ. ಸುದ್ದಿ ವಾಚಕಿಯರಂತೆ ನಾವು ಬರೆದ ಚಿತ್ರಗಳಿಗೆ ಮಾನವ ಸಹಜವಾದ ಹಾವಭಾವಗಳನ್ನು, ಧ್ವನಿಯನ್ನು ನೀಡಬಹುದಷ್ಟೆ ಅಲ್ಲ. ಕೆಲವು ಭಾವಚಿತ್ರಗಳು ಹಾಗೂ ಧ್ವನಿಮಾದರಿಗಳನ್ನು ಬಳಸಿಕೊಂಡು ಎಂದೋ ಮರಣಿಸಿದವರ ವಿಡಿಯೊಗಳನ್ನೂ ರೂಪಿಸಬಹುದು. ವಾಟ್ಸ ಪಿನಲ್ಲಿ ಇತ್ತೀಚೆಗೆ ಶಿವರಾಮ ಕಾರಂತರದು ಇಂತಹುದೊಂದು ವೀಡಿಯೋ ಹರಿದಾಡಿತ್ತು.

ಇಂತಹ ಡೀಪ್ಫೇಕ್ ತಂತ್ರಜ್ಞಾನದಿಂದ ಏನು ಲಾಭ? ಸಿನಿಮಾ ತಯಾರಿಸಬಹುದು. ಯಾರದ್ದೋ ಬಾಯಿಯಲ್ಲಿ ಇನ್ನೇನನ್ನೋ ಹೇಳಿಸಿ ಮೋಸ ಮಾಡಬಹುದು. ಅಥವಾ ಆ ನಟಿಯ ಅಶ್ಲೀಲಚಿತ್ರವನ್ನು ತಯಾರಿಸಿದಂತೆ ಕೆಟ್ಟ ಉದ್ದೇಶಕ್ಕೂ ಬಳಸಿಕೊಳ್ಳಬಹುದು. ಒಟ್ಟಾರೆ ಜನರಿಗೆ ಉಪಯುಕ್ತ ಎನ್ನಿಸುವಂತಹುದು ಏನೂ ಇಲ್ಲ ಎನ್ನುವ ಭಾವನೆ ಇದೆ. ಇದನ್ನು ಸುಳ್ಳೆನ್ನಿಸುತ್ತಿದೆ ಡೀಪ್ಫೇಕ್ ರಿಸರೆಕ್ಷನ್ ತಂತ್ರಜ್ಞಾನ.

ಚೀನಾದ ಸಿಲಿಕಾನ್ ಇಂಟೆಲಿಜೆನ್ಸ್ ಕಂಪೆನಿಯ ಸಹಸ್ಥಾಪಕ ಸುನ್ ಕಾಇಗೆ ಹೀಗೊಂದು ಯೋಚನೆ ಬಂದಿತು. ಸಂಕಟದ ಸಮಯದಲ್ಲಿ ತನ್ನ ಭಾವನೆಗಳನ್ನು ಹೇಳಿಕೊಳ್ಳಲು ತಾಯಿ ಬೇಕು ಎನ್ನಿಸಿತ್ತಂತೆ. ಆದರೆ ತಾಯಿ ಸತ್ತಿದ್ದಳು. ಸುನ್ ಕಂಪೆನಿ ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುತ್ತಿದ್ದರಿಂದ, ತನ್ನ ತಾಯಿಯ ಕೆಲವು ಭಾವಚಿತ್ರಗಳು ಹಾಗೂ ಧ್ವನಿ ಮಾದರಿಯ ನೆರವಿನಿಂದ ಸುನ್ ತಾಯಿಯ ಡೀಪ್ಫೇಕ್ ಅವತಾರವನ್ನು ಸೃಷ್ಟಿಸಿದ. ಇದು ಕೇವಲ ವೀಡಿಯೋವಲ್ಲ. ಕೇಳಿದ ಪ್ರಶ್ನೆಗೆ ಉತ್ತರ ನೀಡುವ ಅಥವಾ ಪ್ರಶ್ನಿಸುವ ಸತ್ತವರ ನೆರಳು.'ಊಟ ಮಾಡಿದೆಯಾ? ರುಚಿಯಾಗಿತ್ತಾ?' ಎಂದೆಲ್ಲ ಪ್ರೀತಿಯಿಂದ ವಿಚಾರಿಸಿಕೊಳ್ಳುವ ವಿಡಿಯೊ. 'ಇಲ್ಲ' ಎಂದರೆ ಸಂದರ್ಭಕ್ಕೆ ತಕ್ಕಂತೆ ತಾಯಿಯ ಧ್ವನಿಯಲ್ಲಿಯೇ ಮಾತನಾಡಿ, ಸಂತೈಸಬಲ್ಲ ಡೀಪ್ಫೇಕ್ ಅವತಾರ. ಸುಖ, ದುಃಖ ಹಂಚಿಕೊಳ್ಳಲು ಇದು ಈಗ ನನಗೆ ನೆರವಾಗಿದೆ ಎನ್ನುತ್ತಾರೆ, ಸುನ್.

ಸಿಲಿಕಾನ್ ಇಂಟೆಲಿಜೆನ್ಸ್ ಕಂಪೆನಿ ಸುನ್ ಅಲ್ಲದೆ ಇನ್ನೂ ಎರಡು ಸಾವಿರ ಗ್ರಾಹಕರಿಗೆ ಇಂತಹ ಡೀಪ್‌ಫೇಕ್‌ ತಂತ್ರಜ್ಞಾನವನ್ನು ಒದಗಿಸಿದೆಯಂತೆ. ಅವೆಲ್ಲವೂ ಕಣ್ಮರೆಯಾದ ಪ್ರೀತಿಪಾತ್ರರ ಅಥವಾ ತಾವು ಜೊತೆಗಿರಲಿ ಎಂದು ಹಂಬಲಿಸುವ ವ್ಯಕ್ತಿಗಳ ಡೀಪ್ಫೇಕ್. ಶಾರುಖ್ ಖಾನಿನೊಟ್ಟಿಗೆ ಮಾತನಾಡಬೇಕಾದಲ್ಲಿ, ಆತನನ್ನು ಭೇಟಿಯಾಗಬೇಕಿಲ್ಲ. ಡೀಪ್ಫೇಕ್ ನಿಮ್ಮ ಮನೆಯಲ್ಲಿಯೇ, ನಿಮ್ಮ ಕಂಫ್ಯೂಟರಿನಲ್ಲಿಯೇ ನಿಮ್ಮೊಂದಿಗೆ ಕನ್ನಡದಲ್ಲಿಯೇ ಮಾತನಾಡುವ ಶಾರುಖ್ ಖಾನನನ್ನು ತಯಾರಿಸಿ ಕೊಡಬಲ್ಲುದು.
ಇದು ಭ್ರಾಮಕವಲ್ಲವೇ? ಇದರಿಂದ ಒಳಿತಾದೀತೋ? ಕೆಟ್ಟದಾದೀತೋ? ಗೊತ್ತಿಲ್ಲ. ಅಷ್ಟೇ ಏಕೆ. ಈ ಡೀಪ್ಫೇಕ್ ಅವತಾರಗಳು ಕೆಲವರಿಗೆ ವಿಚಿತ್ರವೆನ್ನಿಸಬಹುದು. ಇನ್ನು ಕೆಲವರಿಗೆ ನಿಜ ಎನ್ನಿಸಬಹುದು. ಯಾರಿಗೆ ಹೇಗನ್ನಿಸುತ್ತದೆ ಎನ್ನುವುದರ ಮೇಲೆ ಅವರ ನಡವಳಿಕೆಯನ್ನು ಅದು ಪ್ರಭಾವಿಸಬಹುದು ಎಂದು ಇಂತಹ ಡೀಪ್ಫೇಕ್ ರಿಸರೆಕ್ಷನ್ ಬಗ್ಗೆ ಅಧ್ಯಯನ ಮಾಡಿದ ಮನೋವಿಜ್ಞಾನಿಗಳ ಅಂಬೋಣ. ಕೆಲವರಿಗೆ ಇದು ದುಃಖದಿಂದ ಸಾಂತ್ವನ ನೀಡಬಹುದು. ಇನ್ನು ಕೆಲವರಿಗೆ ಇದು ಭ್ರಮೆಯನ್ನು ಹೆಚ್ಚಿಸಬಹುದು.

ನಿತ್ಯಜೀವನದಲ್ಲಿಯೂ ಇಂತಹ ಡೀಪ್‌ಫೇಕನ್ನು ಬಳಸಬಹುದು. 2018ರಲ್ಲಿ ಅಮೆರಿಕೆಯ ಪಾರ್ಕ್‌ಲ್ಯಾಂಡ್ ಎಂಬಲ್ಲಿ ಶಾಲೆಯೊಂದರಲ್ಲಿ ಮಾನಸಿಕವಾಗಿ ಅಸ್ವಸ್ಥನಾಗಿದ್ದವನೊಬ್ಬ ಮಕ್ಕಳ ಮೇಲೆ ಗುಂಡುಗಳ ಮಳೆ ಸುರಿದಿದ್ದ. ಹಲವು ಮಕ್ಕಳು ಸಾವನ್ನಪ್ಪಿದ್ದರು. ಇಂತಹ ಸತ್ತ ಮಗುವೊಂದನ್ನು ಡೀಪ್‌ಫೇಕ್‌ ತಂತ್ರಜ್ಞಾನದಿಂದ ಪುನರುಜ್ಜೀವನಗೊಳಿಸಿದ ಪೊಲೀಸರು, ಬಂದೂಕುಗಳ ಜೊತೆಗೆ ಬದುಕುವುದು ಅಪಾಯಕಾರಿ ಎಂದು ಜಾಹೀರಾತನ್ನು ನೀಡಿದ್ದರು. ಎರಡು ವರ್ಷಗಳ ಹಿಂದೆ ನೆದರ್ಲ್ಯಾಂಡಿನಲ್ಲಿ/// ಒಬ್ಬ ಯುವಕನ ಕೊಲೆ ನಡೆದಿತ್ತು. ಅಲ್ಲಿನ ಪೊಲೀಸರು ಆ ಯುವಕನನ್ನು ಡೀಪ್‌ಫೇಕ್‌ ತಂತ್ರಜ್ಞಾನದಿಂದ ಪುನರುಜ್ಜೀವನಗೊಳಿಸಿ, ತನ್ನ ಕೊಲೆಗಾರನ ಬಗ್ಗೆ ಮಾಹಿತಿ ಕೊಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಳ್ಳುವಂತೆ ಮಾಡಿದ್ದರು.

ನಮ್ಮಲ್ಲಿ ಈ ತಂತ್ರಜ್ಞಾನ ಬೇಕೇ ಎನ್ನುವ ಪ್ರಶ್ನೆಯೇ ಇಲ್ಲ. ಏಕೆಂದರೆ ಸತ್ತವರ ಭಾವಚಿತ್ರಗಳಿಗೆ ಬಣ್ಣ ಹಾಕಿಸಿ, ತಿದ್ದಿ, ತೀಡಿ, ಸುಂದರಗೊಳಿಸುವ ಅಭ್ಯಾಸ ಈಗಾಗಲೇ ಇದೆ. ಇನ್ನು ಡೀಪ್‌ಫೇಕ್‌ ರಿಸರೆಕ್ಷನ್ ಬಂದರೆ ಬಹುಶಃ ಅದಕ್ಕೂ ದೊಡ್ಡ ಮಾರುಕಟ್ಟೆ ಸಿದ್ಧವಾಗಬಹುದೇನೋ? ಕೆಲವೇ ವರ್ಷಗಳ ಹಿಂದೆ ಬಹಳ ದುಬಾರಿಯಾಗಿದ್ದ ಈ ತಂತಜ್ಞಾನದ ಬೆಲೆ ಈಗ ಕೈಗೆಟುಕುವುಂತಿದೆ. ನಮ್ಮಂತಹ ದೊಡ್ಡ ದೇಶದಲ್ಲಿ ಕೆಲವೇ ಶತಾಂಶ ಮಂದಿಗೆ ಈ ಹುಚ್ಚು ಹಿಡಿದರೂ, ದೊಡ್ಡ ಮಾರುಕಟ್ಟೆ ಸಿಗುವುದು ಖಂಡಿತ. ಸತ್ತವರ ನೆರಳು ಹೀಗೆ ಕಾಸು ಹುಟ್ಟಿಸುವ ಉದ್ಯಮವಾಗಬಹುದು.



Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries