ತಿರುವನಂತಪುರಂ: ಸೌತ್ ಸಿನಿ ಇಂಡಸ್ಟ್ರಿಯ ಖ್ಯಾತ ನಟ, ಮಾಲಿವುಡ್ನ ಸೂಪರ್ಸ್ಟಾರ್ ಮೋಹನ್ ಲಾಲ್ ಎಂದರೆ ಜನರಿಗೆ ಅಚ್ಚುಮೆಚ್ಚು. ತಮ್ಮ ಸೌಮ್ಯ ಸ್ವಭಾವ ಹಾಗೂ ನಟನೆಯ ಮೂಲಕವೇ ಸಾಕಷ್ಟು ಹೆಸರು ಮಾಡಿರುವ ಮೋಹನ್ ಲಾಲ್ ಅವರ ಸಿನಿಮಾಗಳನ್ನು ಈಗಲೂ ಜನ ಇಷ್ಟಪಟ್ಟು ವೀಕ್ಷಿಸುತ್ತಾರೆ.
ಮಲಯಾಳಂ ಚಿತ್ರಂಗದ ಹಿರಿಯ ನಟಿ ಶಾಂತಿ ವಿಲಿಯಮ್ಸ್ ಅವರು ನಟ ಮೋಹನ್ ಲಾಲ್ ಕೃತಜ್ಞತೆ ಇಲ್ಲದಿರುವ ವ್ಯಕ್ತಿ ಎಂದು ಆರೋಪ ಮಾಡುವ ಮೂಲಕ ಸುದ್ದಿಯಾಗಿದ್ದಾರೆ. ಇವರ ಪತಿ ವಿಲಿಯಮ್ಸ್ ಛಾಯಾಗ್ರಾಹಕರಾಗಿ ಅನೇಕ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.
1979ರಿಂದ 2005ರವರೆಗೆ ಶಾಂತಿ ಅವರು ಮಲಯಾಳಂನ ಅನೇಕ ಚಿತ್ರ ಹಾಗೂ ಧಾರವಾಹಿಗಳಲ್ಲಿ ನಟಿಸಿದ್ದರು. ಕಾಲಕ್ರಮೇಣ ಚಿತ್ರರಂಗದಿಂದ ಅಂತರ ಕಾಯ್ದುಕೊಳ್ಳಲು ಶುರು ಮಾಡಿದ ಶಾಂತಿ ಆ ನಂತರ ಸಿನಿಮಾ ರಂಗವನ್ನು ಸಂಪೂರ್ಣವಾಗಿ ತೊರೆದರು. ಇತ್ತೀಚಿಗೆ ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಶಾಂತಿ ನಟ ಮೋಹನ್ ಲಾಲ್ ವಿರುದ್ಧ ಹರಿಹಾಯ್ದಿದ್ದಾರೆ.
ನನ್ನ ಪತಿ ವಿಲ್ಲಿಯಮ್ಸ್ ಓರ್ವ ಖ್ಯಾತ ಛಾಯಾಗ್ರಾಹಕ. ಅವರು ಸಾಕಷ್ಟು ಅಡ್ವೆಂಚರಸ್ ಆಗಿದ್ದರು. ಕ್ಯಾಮೆರಾ ಹಿಡಿದು ಎಷ್ಟು ಎತ್ತರಕ್ಕೆ ಬೇಕಿದ್ದರೂ ತೆರಳುತ್ತಿದ್ದರು. ಈಗಿನವರು ಆ ಬಗ್ಗೆ ಯೋಚಿಸಲೂ ಸಾಧ್ಯವಿಲ್ಲ. ಕೆಲವೊಮ್ಮೆ ಅವರು ಟೆಂಪರ್ ಕಳೆದುಕೊಳ್ಳುತ್ತಿದ್ದರು. ಆದರೆ, ಎಲ್ಲಾ ವಿಚಾರದಲ್ಲಿ ಅವರು ವೃತ್ತಿಪರರಾಗಿದ್ದರು. ಮೋಹನ್ಲಾಲ್ ಅವರು ಹೆಲ್ಲೋ ಮದ್ರಾಸ್ ಗರ್ಲ್ ಸಿನಿಮಾದಲ್ಲಿ ನಟಿಸುತ್ತಿದ್ದರು. ಇದಕ್ಕೆ ವಿಲಿಯಮ್ಸ್ ನಿರ್ದೇಶನ ಇತ್ತು. ಅವರು ನಮ್ಮ ಮನೆಗೆ ಭೇಟಿ ನೀಡಿದಾಗ ನನ್ನ ತಾಯಿಯನ್ನು ಮೀಟ್ ಮಾಡುತ್ತಿದ್ದರು. ಅವರು ಶ್ರಿಂಪ್ ಮೀನಿನ ಕರಿ ಮಾಡುವಂತೆ ತಾಯಿ ಬಳಿ ಕೇಳುತ್ತಿದ್ದರು. ಅದು ನಿಜಕ್ಕೂ ಉತ್ತಮ ದಿನಗಳಾಗಿದ್ದವು.
ನಮ್ಮ ಮನೆ ಸಮೀಪ ಮಲಯಾಳಂ ಸಿನಿಮಾ ಶೂಟಿಂಗ್ ಇದ್ದಾಗ ಮೋಹನ್ಲಾಲ್ ನೇರವಾಗಿ ನಮ್ಮ ಮನೆಗೆ ಬರುತ್ತಿದ್ದರು. ನಮ್ಮ ಮನೆಯಲ್ಲಿ ಮಾಡಿದ ಊಟವನ್ನು ತೆಗೆದುಕೊಂಡು ಹೋಗಲು ಲಂಚ್ ಬಾಕ್ಸ್ ಕೂಡ ಇರುತ್ತಿತ್ತು. ಇದೇ ಮೋಹನ್ಲಾಲ್ ನನ್ನ ಪತಿ ಸತ್ತಾಗ ಬರಲೇ ಇಲ್ಲ. ಮೋಹನ್ಲಾಲ್ ಜೊತೆ ವಿಲ್ಲಿಯಮ್ಸ್ ನಾಲ್ಕು ಸಿನಿಮಾ ಮಾಡಿದ್ದಾರೆ. ಆದರೆ, ಮೋಹನ್ಲಾಲ್ಗೆ ನಮ್ಮ ಮನೆಗೆ ಬರೋಕೆ ಸಮಯವೇ ಸಿಗಲಿಲ್ಲ. ದಯವಿಟ್ಟು ತಪ್ಪು ತಿಳಿಯಬೇಡಿ ಅವರಿಗೆ ಕೃತಜ್ಞತೆ ಇಲ್ಲದಿರುವ ವ್ಯಕ್ತಿ. ಎಲ್ಲರೂ ಮೋಹನ್ಲಾಲ್ ಅವರಂತೆ ಇರಬಹುದು. ಆದರೆ, ನಾನು ಹಾಗಲ್ಲ. ಸಿನಿಮಾವೊಂದಕ್ಕೆ ಮೋಹನ್ ಲಾಲ್‌ಗೆ ಹಣ ಬೇಕಿತ್ತು. ಆಗ ನಾನು 60,000 ರೂಪಾಯಿ ಹೊಂದಿಸಲು ನನ್ನ ಚಿನ್ನವನ್ನೂ ಅಡವಿಟ್ಟಿದ್ದೆ. ಆ ಸಮಯದಲ್ಲಿ ನಾನು ಗರ್ಭಿಣಿಯಾಗಿದ್ದೆ. ಇದೇ ಮೋಹನ್ಲಾಲ್ ಅವರು ವಿಮಾನ ನಿಲ್ದಾಣದಲ್ಲಿ ನನ್ನನ್ನು ನೋಡಿಯೂ ನೋಡದಂತೆ ಹೋದರು. ಈಗಲೂ ಅದನ್ನು ನೆನೆಸಿಕೊಂಡಿರೆ ಬೇಜಾರಾಗುತ್ತದೆ ಎಂದು ಹಿರಿಯ ನಟಿ ಶಾಂತಿ ವಿಲಿಯಮ್ಸ್ ಹೇಳಿದ್ದಾರೆ.