ಸೀತಾಪುರ: ಉತ್ತರ ಪ್ರದೇಶದ ಸೀತಾಪುರದ ಉದ್ಯಮಿಯೊಬ್ಬರು ತನ್ನ ತಾಯಿ, ಪತ್ನಿ ಮತ್ತು ಮೂವರು ಅಪ್ರಾಪ್ತ ಮಕ್ಕಳು ಸೇರಿದಂತೆ ಕುಟುಂಬದ ಐವರನ್ನು ಕೊಲೆ ಮಾಡಿ, ಬಳಿಕ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಜಿಲ್ಲಾ ಪೊಲೀಸರ ಪ್ರಕಾರ, ಐವರನ್ನು ಕೊಂದ ಅನುರಾಗ್ ಸಿಂಗ್(45)ಗೆ ಕುಡಿತದ ಚಟ ಇತ್ತು.
ಮೃತರನ್ನು ಅನುರಾಗ್ ಸಿಂಗ್ ಅವರ ತಾಯಿ ಸಾವಿತ್ರಿ ದೇವಿ(60), ಅವರ ಪತ್ನಿ ಪ್ರಿಯಾಂಕಾ(40), ಮತ್ತು ಅವರ ಮೂವರು ಪುತ್ರಿಯರಾದ ಅಶ್ವಿನಿ (12), ಅಶ್ವಿ (10) ಮತ್ತು ಮಗ ಅದ್ವೈತ್ (6) ಎಂದು ಗುರುತಿಸಲಾಗಿದೆ.
ಶನಿವಾರ ಬೆಳಗ್ಗೆ ಸೀತಾಪುರದ ರಾಂಪುರ ಪೊಲೀಸ್ ಠಾಣೆ ವ್ಯಾಪ್ತಿಯ ಪಾಲಾಪುರ ಗ್ರಾಮದಲ್ಲಿ ಈ ಘಟನೆ ವರದಿಯಾಗಿದೆ. ವ್ಯಕ್ತಿಯೊಬ್ಬ ತನ್ನ ನಿವಾಸದಲ್ಲಿ ತನ್ನ ಕುಟುಂಬ ಸದಸ್ಯರನ್ನು ಕೊಲ್ಲಲು ಯತ್ನಿಸುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ.
ತಕ್ಷಣವೇ ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿದೆ. ಆದರೆ ಅಷ್ಟರೊಳಗೆ ಸರಣಿ ಕೊಲೆ ನಡೆದಿದೆ. ಇಬ್ಬರು ಅಪ್ರಾಪ್ತ ಮಕ್ಕಳ ಶವಗಳು ಮನೆಯ ಹೊರಗೆ ಮತ್ತು ಇತರರ ಶವ ಮನೆಯೊಳಗೆ ಪತ್ತೆಯಾಗಿವೆ ಎಂದು ಸೀತಾಪುರ ಪೊಲೀಸ್ ವರಿಷ್ಠಾಧಿಕಾರಿ ಚಕ್ರೇಶ್ ಮಿಶ್ರಾ ಅವರು ತಿಳಿಸಿದ್ದಾರೆ.
ಅನುರಾಗ್ ಮತ್ತು ಅವರ ಪತ್ನಿಯ ದೇಹದ ಮೇಲೆ ಮಾತ್ರ ಗುಂಡೇಟಿನ ಗಾಯಗಳು ಕಂಡುಬಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ತಾಯಿಯ ತಲೆಗೆ ಮತ್ತು ಮಕ್ಕಳಿಗೆ ಸುತ್ತಿಗೆಯಿಂದ ಹೊಡೆದು, ನಂತರ ಮನೆಯ ಎರಡನೇ ಮಹಡಿಯ ಬಾಲ್ಕನಿಯಿಂದ ನೆಲ ಮಹಡಿಗೆ ಎಸೆದಿದ್ದಾರೆ.
ಅನುರಾಗ್ ಸಿಂಗ್ ಕುಡಿತದ ಚಟ ಮತ್ತು ಮಾದಕ ವ್ಯಸನಿಯಾಗಿದ್ದ. ಹೀಗಾಗಿ ತನ್ನನ್ನು ವ್ಯಸನಮುಕ್ತ ಕೇಂದ್ರಕ್ಕೆ ಸೇರಿಸಲು ಉದ್ದೇಶಿಸಿದ್ದ ಕುಟುಂಬ ಸದಸ್ಯರೊಂದಿಗೆ ಜಗಳ ಮಾಡಿದ್ದಾನೆ ಎಂದು ಸೀತಾಪುರ ಎಸ್ಪಿ ಚಕ್ರೇಶ್ ಮಿಶ್ರಾ ಅವರು ಹೇಳಿದ್ದಾರೆ.