ಕರಾವಳಿ ಕರ್ನಾಟಕದ ಭಾಗವಾಗಿದ್ದ ಕಾಸರಗೋಡಿನ ಭಾಷೆ, ಸಂಸ್ಕøತಿ, ಇತಿಹಾಸ, ಸಾಹಿತ್ಯ, ಕಲೆ, ಜನಜೀವನ ಹೀಗೆ ಪ್ರತಿಯೊಂದೂ ಮಹತ್ವಿಕೆಯದ್ದು. ಕಾಸರಗೋಡಿನ ಒಂದೊಂದು ಊರಿಗೂ ಅದರದ್ದೇ ಆದ ಹಿರಿಮೆ ಇದ್ದರೂ ಹೊಸ ತಲೆಮಾರಿಗೆ ಇದೆಲ್ಲದರ ಅರಿವು ಇಮದೀಗ ಲಭ್ಯವಾಗಿಲ್ಲ. ಹಿಂದೆಲ್ಲ ಪಠ್ಯಗಳಲ್ಲಿ ಹಲವು ಉಲ್ಲೇಖಗಳು ಸಾಂದರ್ಭಿಕವಾಗಿಯಾದರೂ ಉಲ್ಲೇಖಿಸಲ್ಪಟ್ಟಿದ್ದರೆ ಇತ್ತೀಚೆಗೆ ಸಂಪೂರ್ಣ ಮಾಯವಾಗಿದೆ.
ಹಿರಿಯ ಸಾಹಿತಿ ಬೇಕಲ ರಾಮನಾಯಕರು ವಸಾಹತುಪೂರ್ವ ಇತಿಹಾಸಕ್ಕೆ ಸಂಬಂಧಿಸಿದ ಕರಾವಳಿ ಜಿಲ್ಲೆಯು ವಿಜಯನಗರದ ವಸಾಹತಾಗಿದ್ದ ಕಾಲದ ಕತೆ ಮತ್ತು ದೊಡ್ಡಮನೆ ಈಶ್ವರಯ್ಯ (ಕೆಳದಿಯವರ ವಸಾಹತಾಗಿದ್ದ ಕಾಲದ ಕತೆ) ಮುಂತಾದ ಐತಿಹ್ಯ ಕತೆಗಳನ್ನು ಬರೆದಿದ್ದಾರೆ. ಕಾಸರಗೋಡಿನಲ್ಲಿ ಅಧ್ಯಾಪಕರಾಗಿದ್ದ ಬೇಕಲ ರಾಮ ನಾಯಕರು ಐತಿಹ್ಯಗಳನ್ನು ಮತ್ತು ಇತಿಹಾಸ ಕತೆಗಳನ್ನು ನಿರೂಪಿಸಿ ಈ ದಿಕ್ಕಿನಲ್ಲಿ ಕೆಲಸ ಮಾಡಿದ ಒಬ್ಬ ಅಪೂರ್ವ ಸಾಹಿತಿಯಾಗಿದ್ದಾರೆ. ಅವರ ಕೃತಿಗಳ ಮೂಲಕ ಜನಸಮುದಾಯದ ಸ್ಮೃತಿಲೋಕದಲ್ಲಿ ದಾಖಲಾಗಿದ್ದ, ಕ್ರಮೇಣ ವಿಸ್ಮೃತಿಗೆ ಸಂದುಹೋಗಬಹುದಾಗಿದ್ದ ಹಲವಾರು ಐತಿಹ್ಯಗಳು ಉಳಿದುಕೊಂಡಿವೆ. ಇಂತಹ ಕಥಾನಕಗಳ ಸೃಜನಾತ್ಮಕ ದಾಖಲೀಕರಣವಲ್ಲದೆ ರಾಮನಾಯಕರು ಕವಿಯೂ, ನಾಟಕಕಾರರೂ ಆಗಿದ್ದರು.
ಕಾಸರಗೋಡಿಗೆ ಸಂಬಂಧಿಸಿದ ಐತಿಹ್ಯಗಳನ್ನು ಸಂಗ್ರಹಿಸಿ ಕೋಟೆಯ ಕತೆಗಳು, ಬಾಳಿದ ಹೆಸರು ಮತ್ತು ಇತರ ಐತಿಹ್ಯಗಳು, ಪುಳ್ಕೂರು ಬಾಚ, ಕೆಚ್ಚಿನ ಕಿಡಿಗಳು, ನಾಡಕತೆಗಳು ಮತ್ತು ತೆಂಕನಾಡ ಐತಿಹ್ಯಗಳು ಎಂಬ ಆರು ಕಥಾ ಸಂಗ್ರಹಗಳನ್ನು ಪ್ರಕಟಿಸಿದರು. ಐತಿಹ್ಯಗಳನ್ನು ಸಂಗ್ರಹಿಸಿ ಕಥೆ ಬರೆದಂತೆ ಹಲವಾರು ನಾಟಕಗಳ ರಚನೆಗಳಲ್ಲಿಯೂ ತೊಡಗಿಕೊಂಡು ತೌಳವ ಸ್ವಾತಂತ್ರ್ಯ, ಕೇತುಭಂಗ (ಧ್ವಜ ವಂದನೆ) ಸೌಭಾಗ್ಯರತ್ನ, ಸತ್ಯಪರೀಕ್ಷೆ, ರತ್ನಹಾರ, ಉತ್ಕಲ ಕುಮಾರಿ, ವೀರ ವಸುಂಧರೆ, ಪ್ರೇಮಲತೆ ಎಂಬ ಎಂಟು ನಾಟಕಗಳನ್ನು ರಚಿಸಿದರು. ಇವುಗಳಲ್ಲಿ ಸಾಮಾಜಿಕ ವಸ್ತುವಾಗುಳ್ಳ ಪ್ರೇಮಲತೆ ಹಾಗೂ ಜಾನಪದ ಗೀತನಾಟಕವಾದ ಸತ್ಯಪರೀಕ್ಷೆಯನ್ನು ಬಿಟ್ಟರೆ ಉಳಿದೆಲ್ಲ ನಾಟಕಗಳೂ ಚಾರಿತ್ರಿಕ ವಸ್ತುಗಳಿಂದ ಕೂಡಿವೆ. ಮತೀಯ ಸಾಮರಸ್ಯ, ದೇಶಪ್ರೇಮ, ನಾಡ ಸಂಸ್ಕøತಿಯ ಬಗ್ಗೆ ಅಭಿಮಾನ ಮೂಡಿಸುವ ಗೀತೆಗಳಿಂದ ಕೂಡಿದ ನಾಟಕಗಳನ್ನು ಶಾಲಾಮಕ್ಕಳು ಅಭಿನಯಿಸುವ ಸಲುವಾಗಿಯೇ ಅವರು ರಚಿಸಿದರು. ದೀರ್ಘಕಾಲ ಅಧ್ಯಾಪನದಲ್ಲಿ ತೊಡಗಿಕೊಂಡಿದ್ದ ನಾಯಕರು, ಸಹಜವಾಗಿ ಮಕ್ಕಳು ಆಕರ್ಷಿತರಾಗುವುದು ಲಯಬದ್ಧ, ಪ್ರಾಸಬದ್ಧ ಹಾಡುಗಳಿಂದ ಎಂಬ ಅರಿವಿನಿಂದ ಹಲವಾರು ಪದ್ಯಗಳನ್ನು ರಚಿಸಿ ‘ಸಚಿತ್ರಬಾಲಗೀತೆ’ ಎಂಬ ಸಂಕಲನ ಮೂಡಿಸಿದರು.
ಇವರ ಗೊಂಬೆ ಪದ್ಯದ ಸುಂದರ ಸಾಲುಗಳು ಹೀಗಿವೆ:
ಸೀರೆಯ ನಿರಿಗೆಯನಾಡಿಪ ಗೊಂಬೆ
ಹೀರೆಯ ಹೂವಿನ ರವಿಕೆಯ ಗೊಂಬೆ
ವಾರೆಯ ಬೈತಲೆಯಾ ಕಣ್ಗೊಂಬೆ
ಕುಣಿಯುವೆ ನಾನು ಕುಣಿಯುವೆನು
ಇವಲ್ಲದೆ ರಾಮನಾಯಕರು ರಾಮಕ್ಷತ್ರಿಯ ಜನಾಂಗದ ಇತಿವೃತ್ತ, ಇಕ್ಕೇರಿನಾಯಕರ ಆಳಿಕೆ, ಬೇಕಲಕೋಟೆ ಮುಂತಾದವುಗಳ ಕುರಿತು ಸಂಶೋಧನಾತ್ಮಕ ಲೇಖನಗಳನ್ನೂ ಬರೆದಿದ್ದರು. ಹಲವಾರು ಜಾನಪದ ಹಾಡುಗಳನ್ನೂ ಸಂಗ್ರಹಿಸಿ ಪ್ರಕಟಿಸಿದ್ದರು. ಅವುಗಳಲ್ಲಿ ಪ್ರಮುಖವಾದ ಹಾಡುಗಳೆಂದರೆ ಸುಬ್ಬಪ್ಪನ ಹಾಡು, ತುಂಬೆಹಾಡು, ಗಿಂಡಿಪೂಜೆ, ಕೌಲಿಹಾಡು ಮೊದಲಾದವು. ಇವರ ಮತ್ತೊಂದು ಅಪೂರ್ವ ಕೃತಿ ಎಂದರೆ ‘ವಾಸಿಷ್ಠರಾಮಾಯಣ’ ಎಂಬ ಸಾಂಗತ್ಯ ಕಾವ್ಯದ ಸಂಪಾದಿತ ಕೃತಿ.
ಹೀಗೆ ಸತತ ಅಭ್ಯಾಸ, ಸಂಶೋಧನೆ ಮತ್ತು ಬರಹಗಳಲ್ಲಿದ್ದ ರಾಮನಾಯಕರು 1969ರ ನವಂಬರ್ 21ರಂದು ಈ ಲೋಕವನ್ನಗಲಿದರು.
ನಾಯಕರ ಸಾಧನೆ, ಕೊಡುಗೆಗಳನ್ನು ನೆನಪಿಸುವ ದೃಷ್ಟಿಯಲ್ಲಿ ಸಮರಸ ಸುದ್ದಿ ಇಂದಿನಿಂದ ನಿಯಮಿತವಾಗಿ ಅವರ ಮೂರು ಐತಿಹಾಸಿಕ ಕಥೆಗಳನ್ನು ಪ್ರಕಟಿಸಲಿದೆ. ಸಹೃದಯ ಓದುಗರು ಓದಿ, ಯುವ ತಲೆಮಾರಿಗೆ ಓದಿಸಿ ಮಣ್ಣಿನ ಸತ್ವವನ್ನು ಪ್ರಚುರಪಡಿಸುವಲ್ಲಿ ನೆರವಾಗುವಿರಿ ಎಂದು ವಿಂತಿಸುವೆವು.
ಮೊದಲ ಕಥೆ: ಬಲ್ಲಾಳ ಕುವರಿ
ಮುತ್ತ ಮೂರು ತಲೆಯಿಂದ ಚಿಪ್ಪಾರಿನ ಬಲ್ಲಾಳ ಬೀಡು ಯಿಟ್ಟಿಲ ಸೀಮೆಯಲ್ಲೆಲ್ಲ ತೊಳಗಿ ಬೆಳಗಿ ಬಂದಿತ್ತು. ಬೀಡಿನಮುಂದೆ ವಿಶಾಲವಾದ ಬಾಕಿಮಾರು ಗದ್ದೆ. ಸುತ್ತಲೂ ಏಳು ಸುತ್ತಿನ ಕಗ್ಗಲ್ಲ ಕೋಟೆ. ಬಾಗಿಲಿಗೆ ಬೆಳ್ಗಲ್ಲ ದಾರಿಂದ. ಚಿತ್ತಾರದ ಕಂಬ ಬೋದಿಗೆಗಳು. ಸುಣ್ಣ-ಬಣ್ಣ ಮೇಲ್ಗಟ್ಟುಗಳಿಂದ ಏಳಂಕಣದ ಆ ನೆಲೆಯುಪ್ಪರಿಗೆಯ ಕಟ್ಟೆಸಕದಿಂದ ಕಂಗೊಳಿಸುತ್ತಿದ್ದಿತು.
ಆ ಬೀಡಿನಲ್ಲಿ ಎಳೆಹರೆಯದ ರಂಗಯ್ಯ ಬಲ್ಲಾಳನು ಪಟ್ಟವೇರಿದ್ದನು. ಎಳೆಯನಾದರೂ ಅವನು ಧೀರವೃತ್ತಿ, ಗುಣೋನ್ನತಿಯಿಂದ ಹಿರಿಯರ ಹೆಸರು ಹೇಳಿಸುವ ಗಂಡಿಗನೆಂದು ಎಲ್ಲರ ಗೌರವಕ್ಕೆ ಪಾತ್ರನಾಗಿದ್ದನು. ಯಿಟ್ಟಲದ 'ಪಾರ್ಥ0ಪಾಡಿ' ಸಿಂಹಾಸನದಲ್ಲಿ ಅನೂಚಾನವಾದ ಭಕ್ತಿಯುಳ್ಳವನಾಗಿ ಅರಸನೊಡನೆ ಪ್ರೀತಿ ವಿಶ್ವಾಸದಿಂದಿದ್ದನು.
ಅವನಿಗೆ ಒಬ್ಬಳು ಮಮತೆಯ ತಂಗಿ ಲಿಂಗಾಯಿ, ಅವಳ ಮೈಸಿರಿ ತುಂಬಿತ್ತು. ಮೂಡುವ ಬೆಳ್ಳಿಯಂಥ ಮೊಗ. ಎಸಳು ಕಂಗಳು, ತಾರುಣ್ಯ ಗುಡಿಗಟ್ಟಿದ ಮಾಟ. ಮುಟ್ಟಿದರೆ ರಸ ಚಿಮ್ಮುವ ಮೈ. ಬೀಡಿನ ಅಗ್ಗಳಿಕೆಗೆ ತಕ್ಕಂಥ ನಯ ವಿನಯ. ಅಣ್ಣ ತಂಗಿಯ ఆ ಸಿರಿಬೀಡಿನಲ್ಲಿ ಸುಖಸಂತೋಷದಿಂದಿದ್ದರು.
ಹೀಗಿರಲು ಒಮ್ಮೆ ರಂಗಯ್ಯ ಬಲ್ಲಾಳನಿಗೆ ಪಾಂಡ್ಯ ರಾಯನ ದಂಡಿನೋಲೆ ಬಂತು. ಅಂದಿನ ದಿನಗಳಲ್ಲಿ ದಂಡಿನ ಕರೆ ಬ0ದಾಗ ಪಾಳಯಗಾರರು ಪಡೆಗೊಂಡು ಕಟ್ಟಾಯವಾಗಿ ಹೋಗ ಬೇಕಾಗಿತ್ತು. ಯುದ್ಧವೆಂದರೆ ರಂಗಯ್ಯನು ತೋಳು ಮಸೆವ ಕಟ್ಟಾಳು. ಆದರೀಗ ನೆಚ್ಚಿದ ತಂಗಿ ಯನ್ನು ಒಬ್ಬಂಟಿಗಳಾಗಿ ಬಿಟ್ಟು ಹೇಗೆ ಹೋಗಲಿ ಎಂಬ ಚಿಂತೆಗೀಡಾಗಿದ್ದನು,
ತಂಗಿಯ ಮೇಲಿನ ವಾತ್ಸಲ್ಯದಿಂದ ಯುದ್ದಕ್ಕೆ ತಪ್ಪಿ ಹೇಡಿಯೆನಿಸಿಕೊಳ್ಳಲು ಆ ಗ0ಡು ಗಲಿಯಂತೂ ಒಪ್ಪುವವನಲ್ಲ. ಯೋಚಿಸಿ ಯೋಚಿಸಿ ಬಳಿಕ ಬಂದುದೆಲ್ಲ ಬರಲಿ, ಎಲ್ಲಕ್ಕೂ ಎದೆಯೊಡ್ಡುವೆನೆಂದು ಸಂಗರಕ್ಕೆ ತೆರಳುವುದೆಂದೇ ನಿರ್ಧರಿಸಿದನು. ಬಿಗಿ ಷರಾಯಿ ತೊಟ್ಟು, ಶಿರಸ್ತ್ರಾಣ ಧರಿಸಿ ಅಂಗೈ ಸರಪಳಿ, ಮು0ಗೈ ಬಳೆ, ಮುದ್ರೆಯುಂಗುರವಿಟ್ಟು, ಬೆಳ್ಳಿ ಕಟ್ಟಿನ ಕಿರುಗತ್ತಿ, ದೊಡ್ಡ ಚಂದ್ರಾಯುಧವನ್ನು ಹಿಡಿದುಕೊಂಡು ತಂಗಿಯನ್ನು ಬೀಳ್ಕೊಡಲು ಬಂದನು.
ಅಗಲಿಕೆಯ ದುಃಖದಿಂದ ಇಬ್ಬರ ಬಾಯಿಯಿಂದಲೂ ಮಾತು ಹೊರಡಲಿಲ್ಲ. ಕಣ್ಣೀರು ಕೋಡಿಯಾಗಿ ಹರಿಯುತ್ತಿತ್ತು. ರಂಗಯ್ಯನು ಮನಸ್ಸನ್ನು ಬಿಗಿಹಿಡಿದು ಭಯಪಡದಿರು ತಂಗಿ.ತಾಯಿ ಉಳ್ಳಾಲ್ತಿಯ ದಯೆಯಿಂದ ನೀನು ಮುಡಿದ ಹೂ ಬಾಡದಿರಲಿ!. ಏಳು ಅಂಕಣಗಳಲ್ಲಿ ಏಳು ನಂದಾದೀಪಗಳು ಆರದಿರಲಿ !” ಎಂದನು.
ಲಿಂಗಾಯಿಯು ಬುತ್ತಿಯನ್ನು ಕಟ್ಟಿ ಕೊಟ್ಟಳು. ಅನಿಷ್ಟ ನಿವಾರಣೆಗೆಂದು ಆರತಿಯನ್ನು ಬೆಳಗಿದಳು. ಉಳ್ಳಾಲ್ತಿಗೆ ಹರಕೆಯನ್ನು ಹೊತ್ತಳು. ವೀರ ರಂಗಯ್ಯನು ಕುದುರೆಯನ್ನೇರಿ ದಂಡು ಮ0ಡಲಕ್ಕೆ ಹೋಗಿಯೇಬಿಟ್ಟನು. ಆಣಿಯಾಗಿದ್ದ ಪಾಳಯವು ಯುದ್ಧೋತ್ಸಾಹದಿಂದ ಅವನನ್ನು ಹಿಂಬಾಲಿಸಿತು. ಲಿಂಗಾಯಿಯು ಪೆರ್ಗದಗಳನ್ನಿಕ್ಕಿ ಲಾಳವಿಂಡಿಗೆಯನ್ನು ಬಲಿದು ಆಗಲಿಕೆಯ ಬೇಗೆಯಲ್ಲಿ ಬೇಯುತಿದ್ದಳು.
(ಮುಂದಿನ ಭಾಗ ನಾಳೆಗೆ)