ನವದೆಹಲಿ: ಕೋವಿಶೀಲ್ಡ್ ಲಸಿಕೆಯಿಂದ ಅಡ್ಡಪರಿಣಾಮ ಇದೆ ಎಂಬುದನ್ನು ಅಸ್ಟ್ರಾಜೆನೆಕಾ ಕಂಪನಿ ಒಪ್ಪಿಕೊಂಡಿರುವುದು ವಿಶ್ವದೆಲ್ಲಡೆ ಭಾರಿ ಸಂಚಲನ ಮೂಡಿಸಿದೆ. ಈ ಲಸಿಕೆ ತೆಗೆದುಕೊಂಡರೆ ರಕ್ತ ಹೆಪ್ಪುಗಟ್ಟುವಿಕೆ ಮತ್ತು ಪ್ಲೇಟ್ಲೇಟ್ ಸಂಖ್ಯೆ ಕಡಿಮೆಯಾಗಬಹುದು ಎಂದು ಕಂಪನಿ ಹೇಳಿದೆ.
ಕೋವಿಶೀಲ್ಡ್ ಲಸಿಕೆ ತೆಗೆದುಕೊಂಡಿದ್ದರಿಂದಲೇ ನಮ್ಮ ಮಕ್ಕಳು ಸಾವಿಗೀಡಾದರು ಎಂದು ಕುಟುಂಬಗಳು ಆರೋಪ ಮಾಡಿವೆ ಮತ್ತು ಅಸ್ಟ್ರಾಜೆನೆಕಾ ಕಂಪನಿ ತಪ್ಪೊಪ್ಪಿಕೊಂಡಿರುವುದರಿಂದ ನ್ಯಾಯಾ ಸಿಗಬಹುದು ಎಂಬ ಭರವಸೆ ವ್ಯಕ್ತಪಡಿಸಿವೆ. ಅಂದಹಾಗೆ ಲಸಿಕೆ ತಯಾರಿಸಿದ್ದು ಸೆರಮ್ ಇನ್ಸ್ಟಿಟ್ಯೂಟ್ ಮತ್ತು ಅದನ್ನು ಹಂಚಿಕೆ ಮಾಡಿದ್ದು ಅಸ್ಟ್ರಾಜೆನೆಕಾ ಕಂಪನಿ.
ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾದ ಕೋವಿಡ್ ಲಸಿಕೆ ಕೋವಿಶೀಲ್ಡ್, ಟಿಟಿಎಸ್ ಅಂದರೆ, ಥ್ರಂಬೋಸಿಸ್ ವಿಥ್ ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್ ಒಳಗೊಂಡಂತೆ ಸಾವು ಮತ್ತು ಗಂಭೀರವಾದ ಗಾಯವನ್ನು ಉಂಟುಮಾಡಬಹುದು. ಈ ಲಸಿಕೆಯು ರಕ್ತ ಹೆಪ್ಪುಗಟ್ಟುವಿಕೆ ಮತ್ತು ಕಡಿಮೆ ರಕ್ತದ ಪ್ಲೇಟ್‌ಲೆಟ್‌ಗೆ ಕಾರಣವಾಗುಬಹುದು ಎಂದು ಎಂದು ದೈತ್ಯ ಔಷಧೀಯ ಕಂಪನಿ ಅಸ್ಟ್ರಾಜೆನೆಕಾ ನ್ಯಾಯಾಲಯದ ದಾಖಲೆಗಳಲ್ಲಿ ಒಪ್ಪಿಕೊಂಡಿದೆ. ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾ ಕೋವಿಡ್ ಲಸಿಕೆಯನ್ನು ಕೋವಿಶೀಲ್ಡ್ ಮತ್ತು ವಕ್ಸೆವ್ರಿಯಾ ಬ್ರ್ಯಾಂಡ್ ಹೆಸರಿನಲ್ಲಿ ಜಗತ್ತಿನಾದ್ಯಂತ ಮಾರಾಟ ಮಾಡಲಾಯಿತು. ಹಲವು ವರ್ಷಗಳ ಬಳಿಕ ಆಘಾತಕಾರಿ ವಿಚಾರ ಬಹಿರಂಗಗೊಂಡಿದ್ದು, ಜಗತ್ತಿನಾದ್ಯಂತ ಭಾರಿ ಚರ್ಚೆಯಾಗುತ್ತಿದೆ.
ಆಗಷ್ಟೇ 12ನೇ ತರಗತಿ ಪೂರ್ಣಗೊಳಿಸಿದ್ದ 18 ವರ್ಷದ ರಿಥೈಕಾ ಶ್ರೀ ಒಮ್ಟ್ರಿ ಎಂಬಾಕೆ 2021ರಲ್ಲಿ ಕೋವಿಡ್ ಉಲ್ಬಣಗೊಂಡಿದ್ದ ಸಮಯದಲ್ಲಿ ಆರ್ಕಿಟೆಕ್ಚರ್ ಓದುತ್ತಿದ್ದರು. ಮೇ ತಿಂಗಳಲ್ಲಿ ಕೋವಿಶೀಲ್ಡ್‌ನ ಮೊದಲ ಡೋಸ್ ತೆಗೆದುಕೊಳ್ಳಲು ತಮ್ಮ ಪಾಲಕರೊಂದಿಗೆ ರಿಥೈಕಾ ಬಂದಿದ್ದರು. ಲಸಿಕೆ ತೆಗೆದುಕೊಂಡ 7 ದಿನಗಳಲ್ಲಿ ರಿಥೈಕಾಗೆ ತೀವ್ರವಾದ ಜ್ವರ ಕಾಣಿಸಿಕೊಂಡಿತು ಮತ್ತು ವಾಂತಿ ಮಾಡಲು ಪ್ರಾರಂಭಿಸಿದರು. ಇದಿಷ್ಟೇ ಅಲ್ಲದೆ, ನಡೆಯಲು ಕೂಡ ಸಾಧ್ಯವಾಗಲಿಲ್ಲ. ಇದಾದ ಬಳಿಕ ರಿಥೈಕಾಳನ್ನು MRI ಸ್ಕ್ಯಾನ್‌ಗೆ ಕರೆದೊಯ್ಯಲಾಯಿತು. ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿರುವುದು ಮತ್ತು ರಕ್ತಸ್ರಾವ ಆಗಿರುವುದು ಸ್ಕ್ಯಾನ್ ವರದಿ ತೋರಿಸಿತು. ಇದಾದ ಎರಡೇ ವಾರಗಳಲ್ಲಿ ರಿಥೈಕಾ ಮೃತಪಟ್ಟಳೆಂದು ಘೋಷಿಸಲಾಯಿತು.
ಆ ಸಮಯದಲ್ಲಿ ರಿಥೈಕಾ ಅವರ ಸಾವಿಗೆ ನಿಖರವಾದ ಕಾರಣ ತಿಳಿದಿರಲಿಲ್ಲ. ಆದರೆ ಎರಡು ಆರ್‌ಟಿಐ ಅರ್ಜಿಗಳನ್ನು ಸಲ್ಲಿಸಿದ ಬಳಿಕ 2021ರ ಡಿಸೆಂಬರ್‌ನಲ್ಲಿ ಕೇಂದ್ರ ಆರೋಗ್ಯ ಸಚಿವಾಲಯವು ರಿಥೈಕಾ 'ಥ್ರಂಬೋಸಿಸ್ ವಿಥ್ ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್' ನಿಂದ ಬಳಲುತ್ತಿದ್ದಾರೆ ಮತ್ತು ಲಸಿಕೆಯಿಂದ ಸಾವಿಗೀಡಾಗಿದ್ದಾರೆ ಎಂದು ಖಚಿತಪಡಿಸಿದ ನಂತರ ಅವರ ಕುಟುಂಬಕ್ಕೆ ಸಾವಿನ ಬಗ್ಗೆ ಸ್ಪಷ್ಟನೆ ಸಿಕ್ಕಿತು.
ಇದೇ ರೀತಿಯ ಮತ್ತೊಂದು ಘಟನೆಯಲ್ಲಿ ವೇಣುಗೋಪಾಲ್ ಗೋವಿಂದನ್ ಎಂಬುವರ ಮಗಳು ಕಾರುಣ್ಯ ಕೂಡ ಲಸಿಕೆ ಹಾಕಿದ ಒಂದು ತಿಂಗಳ ನಂತರ ಅಂದರೆ, 2021ರ ಜುಲೈ ತಿಂಗಳಲ್ಲಿ ನಿಧನರಾದರು. ಆದರೆ, ಆಕೆಯ ಸಾವು ಲಸಿಕೆಯಿಂದ ಉಂಟಾಯಿತು ಎಂದು ತೀರ್ಮಾನಿಸಲು ಸಾಕಷ್ಟು ಪುರಾವೆಗಳಿಲ್ಲ ಎಂದು ರಾಷ್ಟ್ರೀಯ ಸಮಿತಿಯು ತೀರ್ಮಾನಿಸಿತು.
2021ರ ಏಪ್ರಿಲ್ ತಿಂಗಳಲ್ಲಿ ಅಸ್ಟ್ರಾಜೆನೆಕಾ ಲಸಿಕೆಯನ್ನು ಪಡೆದ ನಂತರ ಶಾಶ್ವತ ಮಿದುಳಿನ ಗಾಯವನ್ನು ಅನುಭವಿಸಿದ ಜೇಮೀ ಸ್ಕಾಟ್ ಎಂಬುವರು ಮೊದಲಿಗೆ ಕಂಪನಿ ವಿರುದ್ಧ ಮೊಕದ್ದಮೆ ಹೂಡಿದ್ದಾರೆ. ಇದರ ನಡುವೆ ಸುರಕ್ಷತೆಯ ಕಾರಣದಿಂದ ಯುನೈಟೆಡ್ ಕಿಂಗ್ಡಮ್ನಲ್ಲಿ ಅಸ್ಟ್ರಾಜೆನೆಕಾ-ಆಕ್ಸ್‌ಫರ್ಡ್ ಲಸಿಕೆಯನ್ನು ಇನ್ನು ಮುಂದೆ ನೀಡಲಾಗುವುದಿಲ್ಲ ಎಂದು ಅಲ್ಲಿನ ಸರ್ಕಾರ ಹೇಳಿದೆ. ಕಂಪನಿ ತಪ್ಪೊಪ್ಪಿಕೊಂಡ ಬಳಿಕ ಕಾನೂನು ಪ್ರಕ್ರಿಯೆಗಳು ತೆರೆದುಕೊಳ್ಳುತ್ತಿದ್ದಂತೆ, ಪೀಡಿತ ಕುಟುಂಬಗಳು ನ್ಯಾಯಯುತ ಪರಿಹಾರವನ್ನು ಪಡೆಯಲು ಬಯಸುತ್ತಿವೆ.