ವಾಷಿಂಗ್ಟನ್: ಅಮೆರಿಕದಲ್ಲಿ ಸಿಖ್ ಪ್ರತ್ಯೇಕತಾವಾದಿ ನಾಯಕ ಗುರುಪತ್ವಂತ್ ಸಿಂಗ್ ಪನ್ನೂ ಹತ್ಯೆ ಸಂಚಿನ ಕುರಿತ ಆರೋಪಗಳನ್ನು ಭಾರತ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೀನ್ ಜೀನ್ ಪಿಯರ್ ತಿಳಿಸಿದ್ದಾರೆ.
ಪನ್ನೂ ಹತ್ಯೆಯ ಸಂಚಿನಲ್ಲಿ 'ರಾ' ಅಧಿಕಾರಿ ವಿಕ್ರಂ ಯಾದವ್ ಅವರು ಭಾಗಿಯಾಗಿದ್ದು, ಯಾದವ್ ಅವರು ಸಂಚಿನ ಭಾಗವಾಗಲು ಆಗ ಭಾರತೀಯ ಗುಪ್ತದಳ ಸಂಸ್ಥೆ 'ರಾ' ಮುಖ್ಯಸ್ಥರಾಗಿದ್ದ ಸಾಮಂತ್ ಗೋಯಲ್ ಅವರ ಅನುಮೋದನೆ ಸಿಕ್ಕಿತ್ತು ಎಂದು 'ವಾಷಿಂಗ್ಟನ್ ಪೋಸ್ಟ್' ದೈನಿಕ ವರದಿ ಮಾಡಿದೆ.
ತನಿಖಾ ವರದಿ ಕುರಿತಂತೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಕರೀನ್, ಪನ್ನೂ ಹತ್ಯೆ ಸಂಚಿನಲ್ಲಿ ಭಾರತೀಯ ಗುಪ್ತದಳ ಸಂಸ್ಥೆ ಅಧಿಕಾರಿಗಳ ಪಾತ್ರಗಳ ಕುರಿತು ತನಿಖೆ ನಡೆಯುತ್ತಿದೆ. ನ್ಯಾಯಾಂಗ ಇಲಾಖೆಯಿಂದಲೂ (ಡಿಓಜೆ) ಕ್ರಿಮಿನಲ್ ತನಿಖೆ ನಡೆಯುತ್ತಿದೆ' ಎಂದರು.
'ನಾವು ಈ ವಿಷಯವನ್ನು ಬಹಳ ಗಂಭೀರವಾಗಿ ಪರಿಗಣಿಸಿದ್ದೇವೆ. ಭಾರತ ಸರ್ಕಾರವು ಅಷ್ಟೇ ಗಂಭೀರವಾಗಿ ಈ ವಿಷಯವನ್ನು ಕಾಣುತ್ತಿದೆ. ಈ ಕುರಿತಂತೆ ಭಾರತ ಸರ್ಕಾರಕ್ಕೆ ನಮ್ಮ ಕಳವಳವನ್ನು ವ್ಯಕ್ತಪಡಿಸಿದ್ದೇವೆ ' ಎಂದರು.
'ಭಾರತವು ಅಮೆರಿಕದ ಪ್ರಮುಖ ಪಾಲುದಾರ ದೇಶವಾಗಿದ್ದು, ಹಲವಾರು ಕ್ಷೇತ್ರಗಳಲ್ಲಿ ಉಭಯ ರಾಷ್ಟ್ರಗಳ ಸಹಕಾರವನ್ನು ವಿಸ್ತರಿಸಲು ಮಹತ್ವಾಕಾಂಕ್ಷೆಯ ಕಾರ್ಯಸೂಚಿಯನ್ನು ಅನುಸರಿಸುತ್ತಿದ್ದೇವೆ' ಎಂದರು.
ಜೂನ್ 18ರಂದು ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದಲ್ಲಿ ಖಾಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ನಡೆದಿತ್ತು. ಅದೇ ಅವಧಿಯಲ್ಲಿ ಪನ್ನೂ ಹತ್ಯೆಗೂ ಸಂಚು ನಡೆದಿದ್ದು, ಆ ಕಾರ್ಯಾಚರಣೆಗೂ ವಿಕ್ರಂ ಯಾದವ್ ಅವರಿಗೂ ಸಂಪರ್ಕವಿದೆ ಎಂದೂ ವರದಿ ತಿಳಿಸಿದೆ.