ಮಾವಿನ ಹಣ್ಣಿನ ಸೀಸನ್, ಮಾರುಕಟ್ಟೆಯಲ್ಲಿ ಬಗೆ ಬಗೆಯ ಮಾವಿನ ಹಣ್ಣುಗಳು ಮಾರುಕಟ್ಟೆಗೆ ಬಂದಿದೆ, ಅವುಗಳನ್ನು ನೋಡುವಾಗ ಬಾಯಲ್ಲಿ ನೀರು ಬರುತ್ತದೆ, ಅವುಗಳನ್ನು ತಂದು ತೊಳೆದು ಕತ್ತರಿಸಿ ತಿನ್ನುತ್ತೇವೆ, ಆದರೆ ಇನ್ಮೇಲೆ ಹಾಗೆ ಮಾಡಬೇಡಿ.
ನೀರಿನಲ್ಲಿ ನೆನೆಹಾಕಿ ತಿನ್ನಿ
ಹೌದು ನೀವು ಮಾವಿನಹಣ್ಣನ್ನು ತಂದು ಸ್ವಲ್ಪ ನೀರಿನಲ್ಲಿ ನೆನೆ ಹಾಕಿ, ಏಕೆಂದರೆ ಮಾವಿನಹಣ್ಣಿನ ಹೊರಭಾಗದಲ್ಲಿ ಫಿಟಿಕ್ ಆಮ್ಲ ಇರುತ್ತದೆ. ಇದು ದೇಹವನ್ನು ಸೇರಿದರೆ ಸತು, ಕಬ್ಬಿಣದಂಶವನ್ನು ನಮ್ಮ ದೇಹ ಹೀರಿಕೊಳ್ಳುವುದಿಲ್ಲ, ಆದ್ದರಿಂದ ನೀವು ಮಾವಿನಹಣ್ಣನ್ನು ಸ್ವಲ್ಪ ಹೊತ್ತು ನೀರಿನಲ್ಲಿ ನೆನೆಹಾಕಿ ತಿಂದರೆ ಒಳ್ಳೆಯದು. ಕೆಲವರಿಗೆ ಮಾವಿನ ಹಣ್ಣು ತಿಂದಾಗ ತಲೆನೋವು, ಮಲಬದ್ಧತೆ ಸಮಸ್ಯೆ ಉಂಟಾಗುವುದು, ಈ ರೀತಿ ನೀರಿನಲ್ಲಿ ನೆನೆಹಾಕಿ ಮಾವಿನ ಹಣ್ಣು ತಿನ್ನುವುದರಿಂದ ಆ ಸಮಸ್ಯೆ ಉಂಟಾಗಲ್ಲ. ಏಕೆಂದರೆ ಫಿಟಿಕ್ ಆಮ್ಲ ನೀರಿನಲ್ಲಿ ತೊಳೆದು ಹೋಗುವುದು.
ರಾಸಾಯನಿಕಗಳನ್ನು ಹೋಗಲಾಡಿಸುತ್ತೆ
ನಮ್ಮದೇ ತೋಟದಲ್ಲಿರುವ ಮಾವಿನ ಗಿಡದಿಂದ ತಂದ ಮಾವಿನ ಹಣ್ಣಾದರೆ ಯಾವುದೇ ರಾಸಾಯನಿಕದ ಭಯವಿರಲ್ಲ, ಆದರೆ ಮಾರುಕಟ್ಟೆಯಿಂದ ತರುವ ಹಣ್ಣುಗಳಲ್ಲಿ ರಾಸಾಯನಿಕ ಬಳಸಲ್ಲ ಎಂದು ಹೇಳಲು ಸಾಧ್ಯವಾಗುವುದಿಲ್ಲ, ಆದ್ದರಿಂದ ಮಾವಿನಹಣ್ಣುಗಳನ್ನು ಸ್ವಲ್ಪ ಹೊತ್ತು ನೀರಿನಲ್ಲಿ ನೆನೆಹಾಕಿದರೆ ರಾಸಾಯನಿಕ ಕೂಡ ಹೋಗಲಾಡಿಸಬಹುದು.
ಮಾವಿನ ಹಣ್ಣಿಗೆ ಈ ರಾಸಾಯನಿಕ ಬಳಸುತ್ತಾರೆ
ಮಾವಿನ ಹಣ್ಣು ಬೇಗನೆ ಹಣ್ಣಾಗಲಿ, ಆಕರ್ಷಕ ಬಣ್ಣದಲ್ಲಿ ಕಾಣಿಸಲಿ ಎಂದು ಕ್ಯಾಲ್ಸಿಯಂ ಕಾರ್ಬೈಡ್, ಪಾಸ್ಪರ್ಸ ಹೈಡ್ರೈಡ್ ಈ ಬಗೆಯ ರಾಸಾಯನಿಕ ಬಳಸುತ್ತಾರೆ. ಇವುಗಳನ್ನು ತಿನ್ನುವುದರಿಂದ ಕ್ಯಾನ್ಸರ್‌ನಂಥ ಭಯಾನಕ ಕಾಯಿಲೆ ಬರಬಹುದು, ಆದ್ದರಿಂದ ರಾಸಾಯನಿಕ ಹಾಕಿದ ಹಣ್ಣುಗಳನ್ನು ಖರೀದಿಸಬಾರದು.
ರಾಸಾಯನಿಕ ಹಾಕಿದ ಮಾವಿನ ಹಣ್ಣು ನೋಡುವುದು ಹೇಗೆ?
ನೋಡಿದಾಗ ಆಕರ್ಷಕ ಬಣ್ಣದಿಂದ ಕಾಣಿಸುತ್ತದೆ, ನೋಡಿದರೆ ಹಣ್ಣಾಗಿದೆ ಎಂದು ತೋರುತ್ತೆ, ಆದರೆ ನೀವು ಅದರ ತೊಟ್ಟು ನೋಡಿ ತಿಳಿಯಬಹುದು. ನೈಸರ್ಗಿಕವಾಗಿ ಹಣ್ಣಾಗಿದ್ದರೆ ಮೊದಲು ತೊಟ್ಟಿನ ಭಾಗ ಹಣ್ಣಾಗುವುದು, ಬಣ್ಣ ಬದಲಾಗುವುದು.
ಹಣ್ಣಿನ ರುಚಿ ನೋಡಿ ತಿಳಿಯಬಹುದು
ಮಾವಿನ ಹಣ್ಣು ನೈಸರ್ಗಿಕವಾಗಿ ಹಣ್ಣಾದರೆ ಅದರ ರುಚಿ ತುಂಬಾ ಚೆನ್ನಾಗಿರಲಿದೆ. ಆದರೆ ಈ ರೀತಿ ರಾಸಾಯನಿಕ ಹಾಕಿದ ಹಣ್ಣು ತುಂಬಾ ಹುಳಿ-ಹುಳಿ ಇರುತ್ತದೆ, ಅಲ್ಲದೆ ರಸ ಕಡಿಮೆ ಇರುತ್ತದೆ.
ಮಾವಿನ ಹಣ್ಣುನಲ್ಲಿರುವ ಪ್ರಯೋಜನಗಳು
ಆರೋಗ್ಯಕ್ಕೆ ಒಳ್ಳೆಯದು: ಮಾವಿನ ಹಣ್ಣು ಮಕ್ಕಳಿಂದ ಹಿಡಿದು ಎಲ್ಲರಿಗೂ ಒಳ್ಳೆಯದು, ಇದನ್ನು ಸೇವಿಸುವುದರಿಂದ ಒಟ್ಟು ಮೊತ್ತ ಆರೋಗ್ಯಕ್ಕೆ ಒಳ್ಳೆಯದು.
ಇದು ಸೀಸನಲ್ ಹಣ್ಣಾಗಿರುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ
ತ್ವಚೆಗೆ ತುಂಬಾನೇ ಒಳ್ಳೆಯದು: ಮಾವಿನ ಹಣ್ಣು ಸೇವಿಸುವುದರಿಂದ ತ್ವಚೆಯ ಹೊಳಪು ಹೆಚ್ಚಾಗುವುದು.
ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು: ಮಾವಿನಹಣ್ಣಿನಲ್ಲಿರುವ ಪೋಷಕಾಂಶ ಕಣ್ಣಿನ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
ಮಧುಮೇಹಿಗಳು ಕೂಡ ಇದನ್ನು ತಿನ್ನಬಹುದು: ಮಧುಮೇಹಿಗಳು ಮಾವಿನ ಹಣ್ಣನ್ನು ಮಿತಿಯಲ್ಲಿ ತಿಂದರೆ ಸಮಸ್ಯೆ ಇರಲ್ಲ
ಜೀರ್ಣಕ್ರಿಯೆಗೆ ಒಳ್ಳೆಯದು: ಬೇಸಿಗೆಯಲ್ಲಿ ಮಾವಿನಹಣ್ಣು ಸೇವಿಸುವುದರಿಂದ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು.
ಹೃದಯದ ಆರೋಗ್ಯಕ್ಕೆ ಒಳ್ಳೆಯದು.
ಮಾವಿನ ಹಣ್ಣಿನ ಸಿಪ್ಪೆ ತಿನ್ನಬಹುದೇ?
ಕೆಲವರು ಮಾವಿನ ಹಣ್ಣಿನ ಸಿಪ್ಪೆ ತಿನ್ನುವುದಿಲ್ಲ ಬಿಸಾಡುತ್ತಾರೆ, ಆದರೆ ಮಾವಿನ ಹಣ್ಣಿನ ಸಿಪ್ಪೆಯಲ್ಲಿ ತುಂಬಾನೇ ಪೋಷಕಾಂಶವಿದೆ. ಇದರಲ್ಲಿ ವಿಟಮಿನ್ಸ್, ನಾರಿನಂಶವಿರುತ್ತದೆ, ಅಲ್ಲದೆ ಮಾವಿನ ಹಣ್ಣನ್ನು ಸಿಪ್ಪೆ ಸಹಿತ ತಿನ್ನುವುದರಿಂದ ಬೇಗನೆ ಹೊಟ್ಟೆ ತುಂಬುವುದು.
ಆದ್ದರಿಂದ ನಿಮ್ಮ ತೋಟದಲ್ಲಿ ಬೆಳೆದ ಮಾವಿನಹಣ್ಣಾದರೆ ಸಿಪ್ಪೆ ಸವಿಯಿರಿ, ಮಾರುಕಟ್ಟೆಯಿಂದ ತಂದರೆ ಅದರಲ್ಲಿ ಕೆಮಿಕಲ್ ಹಾಕಿರಬಹುದು ಎಂದು ನಿಮಗೆ ಅನಿಸಿದರೆ ಸಿಪ್ಪೆ ಸೇವಿಸಬೇಡಿ.