ಅಗರ್ತಲಾ: ಐದು ತಿಂಗಳ ಹಿಂದೆಯಷ್ಟೇ ಗಂಡನನ್ನು ಕಳೆದುಕೊಂಡು, ಕಡು ಬಡತನದಲ್ಲಿ ಬಳಲುತ್ತಿರುವ ತ್ರಿಪುರಾದ ಧಲೈ ಜಿಲ್ಲೆಯ ಬುಡಕಟ್ಟು ಮಹಿಳೆಯೊಬ್ಬರು ತನ್ನ ನವಜಾತ ಶಿಶುವನ್ನು ₹ 5,000ಕ್ಕೆ ಮಾರಾಟ ಮಾಡಿರುವ ಪ್ರಕರಣ ನಡೆದಿದೆ.
ಅಗರ್ತಲಾ: ಐದು ತಿಂಗಳ ಹಿಂದೆಯಷ್ಟೇ ಗಂಡನನ್ನು ಕಳೆದುಕೊಂಡು, ಕಡು ಬಡತನದಲ್ಲಿ ಬಳಲುತ್ತಿರುವ ತ್ರಿಪುರಾದ ಧಲೈ ಜಿಲ್ಲೆಯ ಬುಡಕಟ್ಟು ಮಹಿಳೆಯೊಬ್ಬರು ತನ್ನ ನವಜಾತ ಶಿಶುವನ್ನು ₹ 5,000ಕ್ಕೆ ಮಾರಾಟ ಮಾಡಿರುವ ಪ್ರಕರಣ ನಡೆದಿದೆ.
ತ್ರಿಪುರಾ ಜಿಲ್ಲೆಯ ಹೆಜಾಮರದ ದಂಪತಿ, ಈ ನಾಲ್ಕು ದಿನದ ಹೆಣ್ಣು ಮಗುವನ್ನು ಖರೀದಿಸಿದ್ದರು.
ಗಂಡಚೆರ್ರಾ ಉಪವಿಭಾಗದ ತರಬನ್ ಕಾಲೋನಿಯ ಮೊರ್ಮತಿ ತ್ರಿಪುರ (39) ಅವರು ಬುಧವಾರ ಮನೆಯಲ್ಲಿಯೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಐದು ತಿಂಗಳ ಹಿಂದೆ ಪತಿ ಸಾವಿಗೀಡಾಗಿದ್ದರಿಂದ ತೀವ್ರ ಬಡತನ ಕಾಡುತ್ತಿತ್ತು. ಈಗಾಗಲೇ ಇಬ್ಬರು ಪುತ್ರರು ಮತ್ತು ಒಬ್ಬ ಮಗಳನ್ನು ಹೊಂದಿರುವ ಅವರಿಗೆ ಮತ್ತೊಂದು ಮಗುವಿನ ಪೋಷಣೆ ಆರ್ಥಿಕವಾಗಿ ಕಷ್ಟಕರವಾಗಿತ್ತು. ಹೀಗಾಗಿ ಅವರು ಹೆಜಾಮರದ ದಂಪತಿಗೆ ಮಗುವನ್ನು ₹5,000ಕ್ಕೆ ಮಾರಿದ್ದರು ಎಂದು ಉಪ ವಿಭಾಗಾಧಿಕಾರಿ ಅರಿಂದಮ್ ದಾಸ್ ತಿಳಿಸಿದರು.
'ಈ ಬಗ್ಗೆ ಮಾಹಿತಿ ಬಂದ ಕೂಡಲೇ ತ್ವರಿತವಾಗಿ ಮಗುವನ್ನು ರಕ್ಷಿಸಿ, ಪುನಃ ತಾಯಿಯೊಂದಿಗೆ ಸೇರಿಸಲಾಯಿತು' ಎಂದು ಅವರು ವಿವರಿಸಿದರು. ಕುಟುಂಬಕ್ಕೆ ನಿರಂತರ ನೆರವಿನ ಭರವಸೆಯನ್ನೂ ಅವರು ನೀಡಿದರು.
ಉರುವಲು ಮಾರಿ ಸಂಸಾರ ನಡೆಸುತ್ತಿದ್ದ ಮೋರ್ಮತಿ ಅವರ ಪತಿ ಪೂರ್ಣಾಜೋಯ್ ಅವರು ಐದು ತಿಂಗಳ ಹಿಂದೆ ಅನಾರೋಗ್ಯದಿಂದ ಮೃತಪಟ್ಟರು. ಸೂಕ್ತ ವೈದ್ಯಕೀಯ ನೆರವು ಪಡೆಯಲೂ ಅವರಿಗೆ ಆರ್ಥಿಕ ಸಂಕಷ್ಟ ಇತ್ತು. ಇಷ್ಟು ಬಡತನ ಇದ್ದರೂ ಆ ಕುಟುಂಬದ ಬಳಿ ಬಿಪಿಎಲ್ ಪಡಿತರ ಚೀಟಿ ಇಲ್ಲ ಎಂದು ವಿರೋಧ ಪಕ್ಷದ ನಾಯಕ ಜಿತೇಂದ್ರ ಚೌಧರಿ ಬೇಸರ ವ್ಯಕ್ತಪಡಿಸಿದರು.
ಸಂಕಷ್ಟದಲ್ಲಿರುವ ಜನರಿಗೆ ನೆರವು ನೀಡುವಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿವೆ ಎಂದು ಅವರು ಟೀಕಿಸಿದರು.