ಗಿರಿಡೀಹ್ : ಅನ್ಯಾಯ ಮತ್ತು ಸರ್ವಾಧಿಕಾರಿ ಶಕ್ತಿಗಳ ವಿರುದ್ಧ ದಿಟ್ಟ ಹೋರಾಟ ನಡೆಸುತ್ತೇನೆ. ನಾನು, ನನ್ನ ಪತಿಯ ಹೆಜ್ಜೆ ಗುರುತುಗಳನ್ನೇ ಅನುಸರಿಸುತ್ತೇನೆ ಎಂದು ಹೇಮಂತ್ ಸೊರೇನ್ ಪತ್ನಿ, ಕಲ್ಪನಾ ಸೊರೇನ್ ಹೇಳಿದ್ದಾರೆ.
ಬುಡಕಟ್ಟು ಜನಾಂಗದವರು ಯಾರಿಗೂ ತಲೆ ಬಾಗುವುದಿಲ್ಲ.
ತಮ್ಮ ಪತಿಯ ಬಂಧನ ಅನಿರೀಕ್ಷಿತವಾಗಿದೆ. ಇದು ಜೆಎಂಎಂ ಪಕ್ಷಕ್ಕೆ ಹಾಗೂ ನಮ್ಮ ಕುಟುಂಬಕ್ಕೆ ಬಹುದೊಡ್ಡ ಆಘಾತವನ್ನು ಉಂಟುಮಾಡಿದೆ. ನಮಗೆ ನ್ಯಾಯಾಂಗದ ಮೇಲೆ ಸಂಪೂರ್ಣ ನಂಬಿಕೆ ಇದೆ. ಜಾಮೀನಿನ ಮೇಲೆ ಹೇಮಂತ್ ಸೊರೇನ್ ಶೀಘ್ರವಾಗಿ ಹೊರಬರುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಿರಾಪರಾಧಿಯನ್ನು ಗುರಿಯಾಗಿಸಿಕೊಂಡು ಕೇಂದ್ರದ ಬಿಜೆಪಿ ಸರ್ಕಾರ ಪಿತೂರಿ ನಡೆಸಿ, ಹೇಮಂತ್ ಸೊರೇನ್ ಅವರನ್ನು ಬಂಧಿಸಿದೆ. ಆದರೆ ಈ ಲೋಕಸಭಾ ಚುನಾವಣೆಯಲ್ಲಿ ಜನರು ತಕ್ಕ ಉತ್ತರ ನೀಡಲಿದ್ದಾರೆ. ಸರ್ವಾಧಿಕಾರ ವಿರುದ್ಧ ಜನರು ಸಿಟ್ಟಿಗೆದ್ದಿದ್ದಾರೆ.
ನಿಮ್ಮ ಪತಿ ಜೈಲಿನಲ್ಲಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ವಿರೋಧ ಪಕ್ಷಗಳು ಆಡಳಿತ ನಡೆಸುತ್ತಿರುವ ರಾಜ್ಯಗಳಲ್ಲಿಯೇ ಏಕೆ ಇ.ಡಿ ಅಧಿಕಾರಿಗಳಿಂದ ದಾಳಿ ನಡೆಯುತ್ತಿದೆ ಎಂಬ ಅನುಮಾನ ನನ್ನಲ್ಲಿದೆ ಎಂದು ಕಲ್ಪನಾ ಸೊರೇನ್ ಹೇಳಿದ್ದಾರೆ.
ಹೇಮಂತ್ ಸೊರೇನ್ ಅವರ ಬಂಧನವು ಅವರನ್ನು ಬಿಜೆಪಿಗೆ ಸೇರುವಂತೆ ಒತ್ತಡ ಹೇರುವ ರಾಜಕೀಯ ಪ್ರೇರಿತ ಪಿತೂರಿಯಾಗಿದೆ. ಅವರ ಬಂಧನವು ಕೇಂದ್ರ ಸರ್ಕಾರದ ಯೋಜನೆಯ ಭಾಗವಾಗಿದೆ. ಈ ಮೂಲಕ ಅವರನ್ನು( ಹೇಮಂತ್ ಸೊರೇನ್) ಬೆದರಿಸುವ, ಅವಮಾನಿಸುವ ಪ್ರಯತ್ನವಾಗಿದೆ. ಆದರೆ ಈ ಚುನಾವಣೆಯಲ್ಲಿ ಈ ಎಲ್ಲಕ್ಕೂ ಉತ್ತರ ಸಿಗಲಿದೆ ಎಂದಿದ್ದಾರೆ
ನಿಮ್ಮ ಕುಟುಂಬದಲ್ಲಿ ಬಿರುಕು ಬಿಟ್ಟಿದೆಯೇ ಎಂಬುವುದಕ್ಕೆ ಪ್ರತಿಕ್ರಿಯಿಸಿದ ಅವರು, ನಮ್ಮ ಕುಟುಂಬದಲ್ಲಿ ಎಲ್ಲವೂ ಸರಿಯಿದೆ. ಗಾಂಡೇಯ್ ವಿಧಾನಸಭಾ ಉಪಚುನಾವಣೆಗೆ ಸಂಬಂಧಿಸಿದಂತೆ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ನನ್ನ ಪತಿಯ ಸಹೋದರ ಜತೆಗಿದ್ದರು ಎಂದು ಹೇಳಿದ್ದಾರೆ.
ನನಗೆ ರಾಜಕೀಯ ಎಂದಿಗೂ ಆಯ್ಕೆಯಾಗಿರಲಿಲ್ಲ, ಆದರೆ ರಾಜ್ಯ ಹಾಗೂ ಜೆಎಂಎಂ ಪಕ್ಷದಲ್ಲಿನ ಬದಲಾವಣೆಗಳಿಂದಾಗಿ ನಾನು ರಾಜಕೀಯಕ್ಕೆ ಬಂದೆ ಎಂದು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.
ಎಂ.ಟೆಕ್ ಮತ್ತು ಎಂಬಿಎ ಪದವೀಧರೆಯಾಗಿರುವ ಕಲ್ಪನಾ ಅವರ ರಾಜಕೀಯ ಪಯಣ ಮಾರ್ಚ್ 4ರಂದು ನಡೆದ ಜೆಎಂಎಂ ಪಕ್ಷದ ಸ್ಥಾಪನಾ ದಿನದ ಕಾರ್ಯಕ್ರಮದಂದು ಆರಂಭವಾಯಿತು.
ಗಿರಿಡೀಹ್ ಜಿಲ್ಲೆಯ ಗಾಂಡೇಯ್ ಕ್ಷೇತ್ರದ ಶಾಸಕ ಸ್ಥಾನವು ಜೆಎಂಎಂ ಶಾಸಕ ಸರ್ಫರಾಜ್ ಅಹಮದ್ ಅವರ ರಾಜೀನಾಮೆಯಿಂದಾಗಿ ತೆರವಾಗಿತ್ತು. ಈ ಕ್ಷೇತ್ರದಲ್ಲಿ ಮೇ 20ರಂದು ಉಪ ಚುನಾವಣೆ ನಡೆಯಲಿದೆ.