ತೈಪೆ: ಅರಬ್ ರಾಷ್ಟ್ರಗಳೊಂದಿಗೆ ವ್ಯಾಪಾರ ಸಂಬಂಧವನ್ನು ವೃದ್ಧಿಸುವ ಉದ್ದೇಶದಿಂದ ಬೀಜಿಂಗ್‌ನಲ್ಲಿ ಆಯೋಜಿಸಿರುವ 'ಚೀನಾ-ಅರಬ್ ರಾಷ್ಟ್ರಗಳ ಸಹಕಾರ ವೇದಿಕೆ'ಯ ಶೃಂಗಸಭೆಯನ್ನು ಅಧ್ಯಕ್ಷ ಷಿ ಜಿನ್‌ಪಿಂಗ್ ಗುರುವಾರ ಉದ್ಘಾಟಿಸಿದರು.
'ವ್ಯಾಪಾರ, ಶುದ್ಧ ಇಂಧನ, ಬಾಹ್ಯಾಕಾಶ ಅನ್ವೇಷಣೆ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳಿದ್ದು, ಈ ವಿಚಾರದಲ್ಲಿ ಅರಬ್ ರಾಷ್ಟ್ರಗಳ ಸಹಕಾರ ಮತ್ತಷ್ಟು ಹೆಚ್ಚಬೇಕಾಗಿರುವುದು ಅಗತ್ಯ' ಎಂದು ಜಿನ್‌ಪಿಂಗ್ ಪ್ರತಿಪಾದಿಸಿದರು.
ಇಸ್ರೇಲ್ ಮತ್ತು ಹಮಾಸ್ ಬಂಡುಕೋರರ ನಡುವಿನ ಯುದ್ಧವನ್ನು ಪ್ರಸ್ತಾಪಿಸಿದ ಅವರು, 'ಈ ಯುದ್ಧದಿಂದಾಗಿ ಹಲವು ರಾಷ್ಟ್ರಗಳು ತೊಂದರೆ ಅನುಭವಿಸುವಂತಾಗಿದೆ. ಎರಡು ರಾಷ್ಟ್ರಗಳ ಪರಿಹಾರವನ್ನು ಯಾರೂ ಅಲ್ಲಗಳೆಯಲಾಗದು' ಎಂದು ಅವರು ಹೇಳಿದರು.
'ಇಸ್ರೇಲ್ -ಹಮಾಸ್ ನಡುವಿನ ಯುದ್ಧದಿಂದಾಗಿ ಸಂತ್ರಸ್ತರಾಗಿರುವವರಿಗೆ ಹೆಚ್ಚು ಮಾನವೀಯ ನೆರವಿನ ಅಗತ್ಯವಿದೆ. ಅಲ್ಲದೇ, ಈ ಸಂಘರ್ಷ ಶಮನ ಮಾಡಿ ಶಾಂತಿ ಸ್ಥಾಪನೆ ಮಾಡುವುದಕ್ಕಾಗಿ ಅಂತರರಾಷ್ಟ್ರೀಯ ಸಮಾವೇಶವನ್ನು ಆಯೋಜಿಸುವ ಅಗತ್ಯ ಇದೆ' ಎಂದೂ ಹೇಳಿದರು.
ಈಜಿಪ್ಟ್ ಅಧ್ಯಕ್ಷ ಅಬ್ದೆಲ್-ಫತಾಹ್ ಎಲ್‌ಸಿಸಿ, ಟ್ಯುನಿಷಿಯಾ ಅಧ್ಯಕ್ಷ ಕೈಸ್ ಸಯೀದ್, ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಯೇದ್ ಅಲಿ ನಹ್ಯಾನ್, ಬಹರೇನ್ ರಾಜ ಹಮದ್ ಸೇರಿದಂತೆ ಹಲವು ರಾಷ್ಟ್ರಗಳ ನಾಯಕರು ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದರು.
'ಆರ್ಥಿಕತೆಗೆ ಆದ್ಯತೆ': 'ಕೊಲ್ಲಿ ರಾಷ್ಟ್ರಗಳನ್ನು ಒಳಗೊಂಡ ಪ್ರದೇಶದಲ್ಲಿ ತನ್ನ ಆರ್ಥಿಕತೆ ವೃದ್ಧಿಸಲು ಅನುಕೂಲ ವಾತಾವರಣ ಸೃಷ್ಟಿಸುವುದೇ ಚೀನಾದ ಆದ್ಯತೆಯಾಗಿದೆ' ಎಂದು ಬ್ರಿಟನ್‌ನ ಎಕ್ಸ್‌ಟರ್ ವಿಶ್ವವಿದ್ಯಾಲಯದಲ್ಲಿ ರಾಜಕೀಯ ಮತ್ತು ಅಂತರರಾಷ್ಟ್ರೀಯ ಸಂಬಂಧಗಳ ಪ್ರಾಧ್ಯಾಪಕಿಯಾಗಿರುವ ಮಾರಿಯಾ ಪಪಾಜಿಯಾರ್ಜಿಯೊ ಅಭಿಪ್ರಾಯಪಡುತ್ತಾರೆ.
'ಇತ್ತೀಚಿನ ದಿನಗಳಲ್ಲಿ ಕೊಲ್ಲಿ ರಾಷ್ಟ್ರಗಳೊಂದಿಗೆ ಸ್ಥಾಪಿಸಿರುವ ಸಂಬಂಧವನ್ನು ಮತ್ತೊಂದು ಮಜಲಿಗೆ ಕೊಂಡೊಯ್ಯಲು ಚೀನಾ ಬಯಸುತ್ತಿದೆ. ಮುಖ್ಯವಾಗಿ, ವ್ಯಾಪಾರ, 5ಜಿ ತಂತ್ರಜ್ಞಾನ ಹಾಗೂ ಸೈಬರ್ ಕ್ಷೇತ್ರಕ್ಕೆ ಸಂಬಂಧಿಸಿದ ಹೂಡಿಕೆಯನ್ನು ಹೆಚ್ಚಿಸುವುದು ಅದರ ಆದ್ಯತೆಯಾಗಿದೆ' ಎಂದು ಅವರು ವಿಶ್ಲೇಷಿಸಿದ್ದಾರೆ.
'ತಾನು ಪಶ್ಚಿಮ ರಾಷ್ಟ್ರಗಳಿಗೆ ಪರ್ಯಾಯವಾಗಿದ್ದು, ಕೊಲ್ಲಿ ರಾಷ್ಟ್ರಗಳ ಪಾಲಿಗೆ ತಾನು ವಿಶ್ವಾಸಾರ್ಹ ಪಾಲುದಾರ ರಾಷ್ಟ್ರ ಎಂಬುದನ್ನು ತೋರಿಸುವುದು ಸಹ ಚೀನಾದ ಉದ್ದೇಶವಾಗಿದೆ' ಎಂದು ಹೇಳುತ್ತಾರೆ.