ಕಾಸರಗೋಡು: ಹೆಚ್ಚುತ್ತಿರುವ ಉಷ್ಣಾಂಶದ ಹಿನ್ನೆಲೆಯಲ್ಲಿ ಬಿಸಿಲಿಗೆ ಮೈಯೊಡ್ಡಿ ಕೆಲಸ ನಡೆಸುವವರಿಗಾಗಿ ಕಾರ್ಮಿಕ ಇಲಾಖೆ ಜಾರಿಗೆ ತಂದಿರುವ ಮಾನದಂಡ ಪಾಲನೆಯಾಗುತ್ತಿಲ್ಲ ಎಂಬ ದೂರು ವ್ಯಾಪಕಗೊಂಡಿದೆ. ಮದ್ಯಾಹ್ನ 12ರಿಂದ 3ರ ವರೆಗೆ ಬಿಸಿಲಿಗೆ ಕೆಲಸ ನಡೆಸದಂತೆ ಕಾರ್ಮಿಕ ಇಲಾಖೆ ಈಗಾಗಲೇ ಆದೇಶ ಜರಿಗೊಳಿಸಿದ್ದು, ಇದಕ್ಕಾಗಿ ಕೆಲಸದ ಸಮಯದಲ್ಲೂ ಬದಲಾವಣೆಯನ್ನು ಮಾಡಲಾಗಿದೆ.
ಆದರೆ, ಗುತ್ತಿಗೆದಾರರು ಇಲಾಖೆ ನಿರ್ದೇಶ ಗಾಳಿಗೆ ತೂರಿ, ಕಾರ್ಮಿಕರನ್ನು ಬಿರು ಬಿಸಿಲಲ್ಲೂ ದುಡಿಸುತ್ತಿರುವುದಾಗಿ ದೂರು ಕೇಳಿ ಬರುತ್ತಿದೆ. ದಿನಕಳೆದಂತೆ ಬಿಸಿಲಿನ ತಾಪ ಏರುತ್ತಿರುವುದನ್ನು ಮನಗಂಡು ಆರೋಗ್ಯ ಇಲಾಖೆ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಿದ್ದರೂ, ಇದನ್ನು ಸಮರ್ಪಕವಾಗಿ ಜಾರಿಗೊಳಿಸುವಲ್ಲಿ ಇಲಾಖೆ ವಿಫಲವಾಗಿದೆ.
ಬೇಸಿಗೆ ತೀವ್ರತೆ ಮುಂದುವರಿದಿದ್ದು, ಬಿಸಿಲಿನಲ್ಲಿ ಕೆಲಸ ಮಾಡುವ ಕಾರ್ಮಿಕರು ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ (ಜಾರಿ) ಮಾಹಿತಿ ನೀಡಿದ್ದಾರೆ. ದಿನದ ಪಾಳಿಯಲ್ಲಿ ಕೆಲಸ ಮಾಡುವ ಪ್ರಸ್ತುತ ಸನ್ನಿವೇಶದಲ್ಲಿ ಮಧ್ಯಾಹ್ನ 12ರಿಂದ 3ರವರೆಗೆ ಕಾರ್ಮಿಕರಿಗೆ ವಿಶ್ರಾಂತಿ ನೀಡಬೇಕು. ನಿರ್ಜಲೀಕರಣದಿಂದಾಗಿ ಕುಸಿದು ಬೀಳುವ ಅಪಾಯವಿರುವುದರಿಂದ ಕಾರ್ಮಿಕರು ಸಾಕಷ್ಟು ನೀರು ಕುಡಿಯುವಮತೆಯೂ ಸಲಹೆ ನೀಡಲಾಗಿದೆ. ಕೆಲಸ ಮಾಡುವಾಗ ಪಾದರಕ್ಷೆ, ಛತ್ರಿ ಅಥವಾ ಟೋಪಿ ಧರಿಸಬೇಕು, ಚಹಾ ಮತ್ತು ಕಾಫಿಯಂತಹ ಪಾನೀಯದ ಸೇವನೆ ಕಡಿಮೆ ಮಾಡಿ, ಸಾಕಷ್ಟು ಎಳನೀರು ಕುಡಿಯಬೇಕು, ಬಾಯಾರಿಕೆ ಇಲ್ಲದಿದ್ದರೂ ನೀರು ಕುಡಿಯಬೇಕು, ಸಡಿಲವಾದ ಹತ್ತಿ ಬಟ್ಟೆಗಳನ್ನು ಧರಿಸಬೇಕು ಎಂದೂ ಮಾನದಂಡದಲ್ಲಿ ತಿಳಿಸಲಾಗಿದೆ.
ಕಠಿಣ ಕ್ರಮಕ್ಕೆ ನಿರ್ದೇಶ:
ಮಧ್ಯಾಹ್ನ 12ರಿಂದ 3ಗಂಟೆ ಮಧ್ಯೆ ಕಾರ್ಮಿಕರನ್ನು ಕೆಲಸದಲ್ಲಿ ತೊಡಗಿಸಿಕೊಳ್ಳುವ ಮಾಲೀಕರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವ ಬಗ್ಗೆ ಕಾರ್ಮಿಕ ಇಲಾಖೆ ನಿದೇಶ ನೀಡಿದ್ದರೂ, ಇದ್ಯಾವುದೂ ಪಾಲನೆಯಾಗುತ್ತಿಲ್ಲ. ಬಹುತೇಕ ಕಡೆ ಕಾಂಕ್ರೀಟ್ ಕಾಮಗಾರಿ ಬಿಡುವಿಲ್ಲದೆ ನಡೆಸಲಾಗುತ್ತಿದೆ. ಇದರಿಂದ ಮಹಿಳೆಯರು ಸೇರಿದಂತೆ ಕಾರ್ಮಿಕರು ಹೆಚ್ಚಿನ ಬಳಲುವಿಕೆ ಅನುಭವಸಬೇಕಾಗುತ್ತಿದೆ. ಕಟ್ಟಡ ನಿರ್ಮಾಣ ಕಮಗಾರಿಗಳಲ್ಲಿ ಇತರ ರಾಜ್ಯಗಳ ಕಾರ್ಮಿಕರ ಸಂಖ್ಯೆ ಹೆಚ್ಚಾಗಿದ್ದು, ಬಿರು ಬಿಸಿಲನ್ನೂ ಲೆಕ್ಕಿಸದೆ ಇವರು ಕೆಲಸದಲ್ಲಿ ನಿರತರಾಗುತ್ತಿರುವುದು ನಿರ್ಮಾಣ ಗುತ್ತಿಗೆದಾರರಿಗೆ ವರದಾನವಾಗುತ್ತಿದೆ.
ಬಿಸಿಲಿನ ಆಘಾತದಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಕಟ್ಟಡ ಮಾಲಿಕರಿಗೆ ಹಾಗೂ ಗುತ್ತಿಗೆದಾರರಿಗೆ ಮನವರಿಕೆ ಮಾಡಿಕೊಡಲಾಗುತ್ತಿದೆ. ಇಲಾಖೆ ಸೂಚಿಸಿದ ಕಾಲಾವಧಿಯಲ್ಲಿ ಕೆಲಸ ನಿಲುಗಡೆಗೊಳಿಸಿ ಕಾರ್ಮಿಕರಿಗೆ ವಿಶ್ರಾಂತಿ ನೀಡದಿದ್ದಲ್ಲಿ, ಆಯಾ ಕಾಮಗಾರಿ ನಡೆಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಈ ಕಾಲಾವಧಿಯಲ್ಲಿ ಕಾರ್ಮಿಕರಿಗೆ ಉಂಟಾಗುವ ಅಸೌಖ್ಯ ಅಥವಾ ಜೀವಹಾನಿಗೆ ಕಟ್ಟಡ ಮಾಳಿಕರು ಅಥವಾ ಗುತ್ತಿಗೆದಾರರು ಜವಾಬ್ದಾರರಾಗಿದಬೇಕು. ಈ ಬಗ್ಗೆ ಕಾಸರಗೋಡು ಮತ್ತು ಕಾಞಂಗಾಡಿನಲ್ಲಿ ಎರಡು ತಂಡಗಳಾಗಿ ತೆರಳಿ ತಪಾಸಣೆ ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ ಕಾರ್ಮಿಕ ಇಲಾಖೆಯಲ್ಲಿ ಸಿಬ್ಬಂದಿ ಹಾಗೂ ವಾಹನಗಳ ಕೊರತೆಯಿರುವುದರಿಂದ ಸಕಾಲದಲ್ಲಿ ಎಲ್ಲಾ ಕಡೆ ತೆರಳಲಾಗುತ್ತಿಲ್ಲ.
ಜಯಕೃಷ್ಣನ್, ಸಹಾಯಕ ಕಾರ್ಮಿಕ ಅಧಿಕಾರಿ
ಕಟ್ಟಡ ನಿರ್ಮಾಣ ವಿಭಾಗ, ಕಾಸರಗೋಡು