ಮುಂಬೈ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಪ್ರಚಾರ ಕಾರ್ಯದಲ್ಲಿ ತೊಡಗಿರುವುದು ಬಿಜೆಪಿಗೆ ಲಾಭವಾಗಿ ಪರಿಣಮಿಸಲಿದೆ. ಏಕೆಂದರೆ ಜನರು ಹಗರಣದಲ್ಲಿ ಭಾಗಿಯಾಗಿರುವ ಕೇಜ್ರಿವಾಲ್‌ರನ್ನು ಹಾಗೂ ಅವರು ನೀಡಿದ ಸುಳ್ಳು ಭರವಸೆಗಳನ್ನು ಸದಾ ನೆನಪಿನಲ್ಲಿ ಇಟ್ಟುಕೊಳ್ಳುತ್ತಾರೆ ಎಂದು ಕೇಂದ್ರ ಸಚಿವ ಪಿಯುಷ್ ಗೋಯಲ್ ಬುಧವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಲೆಂದು ಕೇಜ್ರಿವಾಲ್‌ಗೆ ಜಾಮೀನು ಮಂಜೂರು ಮಾಡಲಾಗಿದೆ. ಈ ಬೆಳವಣಿಗೆ ಉತ್ತಮವಾಗಿದೆ. ಏಕೆಂದರೆ ಕೇಜ್ರಿವಾಲ್ ಅಬಕಾರಿ ನೀತಿ ಹಗರಣದಲ್ಲಿ ಭಾಗಿಯಾಗಿದ್ದಾರೆ. ಜನರಿಗೆ ನೀಡಿದ್ದ ಭರವಸೆಗಳನ್ನು ಅವರು ಮುರಿದಿದ್ದಾರೆ ಎಂದು ತಿಳಿಸಿದ್ದಾರೆ.
ಕೇಜ್ರಿವಾಲ್ ಅವರ ಈ ಎಲ್ಲಾ ನಡೆಯನ್ನು ಜನರು ಗಮನಿಸುತ್ತಿದ್ದು, ನೆನಪಿನಲ್ಲಿ ಇಟ್ಟುಕೊಳ್ಳುತ್ತಾರೆ. ಇದರಿಂದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚಿನ ಮತಗಳನ್ನು ತಂದುಕೊಡಲಿದೆ ಎಂದು ಗೋಯಲ್ ತಿಳಿಸಿದ್ದಾರೆ.
ಮುಂಬೈ ಉತ್ತರ ಲೋಕಸಭಾ ಕ್ಷೇತ್ರದಿಂದ ಪಿಯುಷ್ ಗೋಯಲ್ ಕಣಕ್ಕೆ ಇಳಿಯುತ್ತಿದ್ದು, ಕಾಂಗ್ರೆಸ್ ಅಭ್ಯರ್ಥಿ ಭೂಷಣ್ ಪಾಟೀಲ್ ವಿರುದ್ಧ ಸ್ಪರ್ಧಿಸುತ್ತಿದ್ದಾರೆ.