ಕೀವ್: ಉಕ್ರೇನ್‌ನ ಹಾರ್ಕಿವ್ ನಗರದ ಮೇಲೆ ಶನಿವಾರ ರಷ್ಯಾ ನಡೆಸಿದ ಬಾಂಬ್ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. ಈ ನಡುವೆ ಉಕ್ರೇನಿನ ಉತ್ತರ ಗಡಿಯಲ್ಲಿ ರಷ್ಯಾ ತನ್ನ ಆಕ್ರಮಣವನ್ನು ತೀವ್ರಗೊಳಿಸಲು ತಯಾರಿ ನಡೆಸುತ್ತಿದೆ ಎಂದು ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಭಾನುವಾರ ಹೇಳಿದ್ದಾರೆ.
ಬಾಂಬ್ ಸ್ಫೋಟದಲ್ಲಿ 43 ಜನರು ಗಾಯಗೊಂಡಿದ್ದರೆ, 16 ಜನರು ನಾಪತ್ತೆಯಾಗಿದ್ದಾರೆ ಎಂದು ಹಾರ್ಕಿವ್ ಗವರ್ನರ್ ಓಲೆಹ್ ಸಿನಿಹುಬೊವ್ ತಿಳಿಸಿದ್ದಾರೆ.
ವಿಡಿಯೊ ಸಂದೇಶ ಹಂಚಿಕೊಂಡಿರುವ ಝೆಲೆನ್‌ಸ್ಕಿ 'ಹಾರ್ಕಿವ್ ನಗರದಿಂದ ವಾಯುವ್ಯಕ್ಕೆ 90 ಕಿ.ಮೀ ದೂರದಲ್ಲಿ ರಷ್ಯಾವು ಆಕ್ರಮಣಕಾರಿ ಕ್ರಮ ಕೈಗೊಳ್ಳುತ್ತಿದೆ. ನಮ್ಮ ಗಡಿ ಬಳಿ ರಷ್ಯಾದ ಸೇನಾ ಪಡೆಗಳಿವೆ' ಎಂದಿದ್ದಾರೆ.
ರಷ್ಯಾ ಸೇನೆ ಪಡೆಗಳು ಯಾವ ಸ್ಥಳದಲ್ಲಿವೆ ಎಂಬುದನ್ನು ನಿರ್ದಿಷ್ಟಪಡಿಸಿಲ್ಲ. ಆದರೆ, ಉಕ್ರೇನ್ ಅಧಿಕಾರಿಗಳು ಸುಮಿ ಪ್ರದೇಶದ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಸುಮಾರು 2,50,000 ಜನರಿರುವ ಹಾರ್ಕಿವ್ ಮತ್ತು ಸುಮಿ ನಗರಗಳು ರಷ್ಯಾದ ಗಡಿಯಿಂದ ಕೇವಲ 25 ಕಿ.ಮೀ ದೂರದಲ್ಲಿವೆ.
ರಷ್ಯಾ ಪಡೆಗಳು ಹಾರ್ಕಿವ್ ಪ್ರದೇಶಗಳಲ್ಲಿನ ಹಳ್ಳಿಗಳನ್ನು ವಶಪಡಿಸಿಕೊಂಡಿದ್ದು, ನಗರದ ಕೇಂದ್ರ ಭಾಗದಲ್ಲಿ ಬರಲು ಪ್ರಯತ್ನಿಸುತ್ತಿವೆ ಎಂದು ವಿಶ್ಲೇಷಕರು ತಿಳಿಸಿದ್ದಾರೆ. ಮೇ 10ರಿಂದ ಈವರೆಗೆ ಉಕ್ರೇನ್ ಅಧಿಕಾರಿಗಳು ಇಲ್ಲಿಂದ 11,000 ಜನರನ್ನು ಸ್ಥಳಾಂತರಗೊಳಿಸಿದ್ದಾರೆ.