ಕೋಟಾ: ಮೂರು ವರ್ಷದ ಬಾಲಕಿಯನ್ನು ಆಕೆಯ ಪೋಷಕರು ಕಾರಿನಲ್ಲೇ ಬಿಟ್ಟು ಮದುವೆ ಕಾರ್ಯಕ್ರಮಕ್ಕೆ ಹೋಗಿದ್ದಾಗ ಮಗು ಉಸಿರುಗಟ್ಟಿ ಸಾವನ್ನಪ್ಪಿದ ಘಟನೆ ರಾಜಸ್ಥಾನದ ಕೋಟಾದಲ್ಲಿ ನಡೆದಿದೆ.
ಪೊಲೀಸರ ಪ್ರಕಾರ ಈ ಘಟನೆ ಬುಧವಾರ ಸಂಜೆ ನಡೆದಿದ್ದು, ಮೃತ ಬಾಲಕಿಯನ್ನು ಗೋರ್ವಿಕಾ ನಗರ್ ಎಂದು ಗುರುತಿಸಲಾಗಿದೆ.
ಬಾಲಕಿಯ ತಂದೆ ಪ್ರದೀಪ್ ನಗರ ಅವರು ತಮ್ಮ ಪತ್ನಿ ಹಾಗೂ ಇಬ್ಬರು ಪುತ್ರಿಯರೊಂದಿಗೆ ಜೋರಾವರಪುರ ಗ್ರಾಮದಲ್ಲಿ ನಡೆದ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳಿದ್ದರು.
ವಿವಾಹ ಸ್ಥಳಕ್ಕೆ ತಲುಪುತ್ತಿದ್ದಂತೆ, ತಾಯಿ ಮತ್ತು ಅವರ ಹಿರಿಯ ಮಗಳು ಕಾರಿನಿಂದ ಹೊರಬಂದರು ಮತ್ತು ಪ್ರದೀಪ್ ವಾಹನವನ್ನು ಪಾರ್ಕ್ ಮಾಡಲು ಹೋಗಿದ್ದಾರೆ ಮತ್ತು ಗೋರ್ವಿಕಾ ತನ್ನ ತಾಯಿಯೊಂದಿಗೆ ಹೋಗಿದ್ದಾಳೆ ಎಂದು ಭಾವಿಸಿ, ಪ್ರದೀಪ್ ಕಾರನ್ನು ಲಾಕ್ ಮಾಡಿ ಸಮಾರಂಭದಲ್ಲಿ ಭಾಗವಹಿಸಲು ಹೋಗಿದ್ದಾನೆ ಎಂದು ಖತೋಲಿ ಪೊಲೀಸ್ ಠಾಣೆಯ ಎಸ್‌ಎಚ್‌ಒ ಬನ್ನಾ ಲಾಲ್ ತಿಳಿಸಿದ್ದಾರೆ.
ಸುಮಾರು ಎರಡು ಗಂಟೆಗಳ ಕಾಲ, ಇಬ್ಬರೂ ಪೋಷಕರು ವಿವಿಧ ಗುಂಪುಗಳಲ್ಲಿ ಸಂಭಾಷಣೆಯಲ್ಲಿ ತೊಡಗಿದ್ದರು. ನಂತರ ಅವರು ಪರಸ್ಪರ ಭೇಟಿಯಾದಾಗ ಗೋರ್ವಿಕಾ ಬಗ್ಗೆ ಕೇಳಿದಾಗ ಇಬ್ಬರೂ ಜೊತೆಯಲ್ಲಿಲ್ಲ ಎಂದು ಅರಿತುಕೊಂಡಿದ್ದಾರೆ. ಬಳಿಕ ಅವಳನ್ನು ಹುಡುಕಲು ಪ್ರಾರಂಭಿಸಿದರು ಎಂದು ಲಾಲ್ ಹೇಳಿದ್ದಾರೆ.
ನಂತರ ಕಾರಿನ ಹಿಂದಿನ ಸೀಟಿನಲ್ಲಿ ಬಾಲಕಿ ಪ್ರಜ್ಞಾಹೀನಳಾಗಿರುವುದನ್ನು ಕಂಡ ಪೋಷಕರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ವೈದ್ಯರು ಬಾಲಕಿ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ ಎಂದು ಲಾಲ್ ಹೇಳಿದರು.
ಶವಪರೀಕ್ಷೆ ನಡೆಸಲು ಮತ್ತು ಪೊಲೀಸ್ ಪ್ರಕರಣ ದಾಖಲಿಸಲು ಪೋಷಕರು ನಿರಾಕರಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.