ಪ್ರಯಾಗ್‌ರಾಜ್(PTI): 'ವಿವಾದದಲ್ಲಿರುವ ಆಸ್ತಿಯ ಮಾಲೀಕತ್ವಕ್ಕೆ ಸಂಬಂಧಿಸಿ ಮಸೀದಿ ಸಮಿತಿ ಅಥವಾ ಸುನ್ನಿ ಕೇಂದ್ರೀಯ ವಕ್ಫ್ ಮಂಡಳಿಯಾಗಲಿ ಈವರೆಗೆ ಯಾವುದೇ ದಾಖಲೆಗಳನ್ನು ಸಲ್ಲಿಸಿಲ್ಲ' ಎಂದು ಕೃಷ್ಣ ಜನ್ಮಭೂಮಿ-ಶಾಹಿ ಈದ್ಗಾ ಪ್ರಕರಣದಲ್ಲಿ ಹಿಂದೂ ಪರ ಅರ್ಜಿದಾರರು ಅಲಹಾಬಾದ್ ಹೈಕೋರ್ಟ್‌ಗೆ ಗುರುವಾರ ತಿಳಿಸಿದ್ದಾರೆ.
'ವಿದ್ಯುತ್ ಸಂಪರ್ಕ ಕೂಡ ಮಸೀದಿ ಸಮಿತಿ ಅಥವಾ ವಕ್ಫ್ ಮಂಡಳಿ ಹೆಸರಿನಲ್ಲಿ ಇಲ್ಲ. ವಿವಾದಿತ ಸ್ಥಳದಲ್ಲಿ ಕಾನೂನುಬಾಹಿರವಾಗಿ ವಿದ್ಯುತ್ ಬಳಕೆ ಮಾಡಲಾಗುತ್ತಿದ್ದು, ಈ ಸಂಬಂಧ ವಿದ್ಯುತ್ ಇಲಾಖೆಯು ಎಫ್‌ಐಆರ್ ದಾಖಲಿಸಿದೆ' ಎಂದು ಹಿಂದೂ ಪರ ವಕೀಲರು ಹೈಕೋರ್ಟ್‌ಗೆ ತಿಳಿಸಿದ್ದಾರೆ.
ಹಿಂದೂ ಪರ ಅರ್ಜಿದಾರರು ಸಲ್ಲಿಸಿರುವ ಮೇಲ್ಮನವಿ ಸಮರ್ಥನೀಯವೇ ಎಂದು ಪ್ರಶ್ನಿಸಿ ಮುಸ್ಲಿಂ ಕಡೆಯವರು ಸಲ್ಲಿಸಿರುವ ಅರ್ಜಿ ಕುರಿತು ನ್ಯಾಯಮೂರ್ತಿ ಮಯಂಕ್ ಕುಮಾರ್ ಜೈನ್ ಅವರಿದ್ದ ಪೀಠವು ವಿಚಾರಣೆ ನಡೆಸಿದ ವೇಳೆ ಈ ಮಾಹಿತಿ ನೀಡಲಾಗಿದೆ. ವಾದ-ಪ್ರತಿವಾದಗಳನ್ನು ಅಲಿಸಿದ ನ್ಯಾಯಪೀಠ, ವಿಚಾರಣೆಯನ್ನು ಮೇ 20ಕ್ಕೆ ಮುಂದೂಡಿತು.