ತಿರುವನಂತಪುರ: ಕೇರಳದಲ್ಲಿ ಮುಂದಿನ ಕೆಲವು ದಿನಗಳಲ್ಲಿ ಮಳೆ ತೀವ್ರಗೊಳ್ಳುವ ಸಾಧ್ಯತೆ ಇರುವುದರಿಂದ ಭಾರತೀಯ ಹವಾಮಾನ ಇಲಾಖೆ ಗುರುವಾರ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮೇ 18ರಿಂದ ಮೇ 20ರ ವರೆಗೆ ಆರೆಂಜ್ ಅಲರ್ಟ್ ಘೋಷಿಸಿದೆ.
ಭಾರತೀಯ ಹವಾಮಾನ ಇಲಾಖೆ ಮೇ 18ರಂದು ಪಾಲಕ್ಕಾಡ್ ಹಾಗೂ ಮಲಪ್ಪುರಂ, ಮೇ 19ರಂದು ಪತ್ತನಂತಿಟ್ಟ, ಆಲಪ್ಪುಳ ಹಾಗೂ ಇಡುಕ್ಕಿ, ಮೇ 20ರಂದು ರಾಜ್ಯದ 7 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಿದೆ.
ಮೇ 20ರಂದು ಕೆಲವು ಜಿಲ್ಲೆಗಳಲ್ಲಿ ಆರೆಂಜ್ ಮುನ್ನೆಚ್ಚರಿಕೆ ನೀಡಿದ್ದರೂ ರೆಡ್ ಅಲರ್ಟ್ ನಂತೆಯೇ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತದ ಹವಾಮಾನ ಇಲಾಖೆ ತಿಳಿಸಿದೆ.
ತಮಿಳುನಾಡಿನ ಹಲವೆಡೆ ಸಾಧಾರಣ ಮಳೆ (ಚೆನ್ನೈ ವರದಿ):
ತಮಿಳುನಾಡಿನ ಚೆನ್ವೈ ಹಾಗೂ ಸುತ್ತಲಿನ ಜಿಲ್ಲೆಗಳಲ್ಲಿ ಗುರುವಾರ ಸಾಧಾರಣ ಮಳೆಯಾಗಿದ್ದು, ತಾಪಮಾನದಿಂದ ಬಿಡುವು ದೊರೆತಂತಾಗಿದೆ.
ಮಳೆಯು ಜನರಲ್ಲಿ ಹರ್ಷ ತಂದಿದ್ದು, ಮೇ.19ರಂದು ಸಾಧಾರಣ ಮಳೆಯಾಗುವ ನಿರೀಕ್ಷೆಯಿದ್ದು, ವಿವಿಧೆಡೆ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬಂಗಾಳ ಕೊಲ್ಲಿ ಮತ್ತು ಶ್ರೀಲಂಕಾದ ಮೇಲಿನ ವಾಯು ಚಂಡಮಾರುತ ಪ್ರಭಾವದಿಂದ ಮಳೆಯಾಗಿದ್ದು, ದಕ್ಷಿಣ ತಮಿಳುನಾಡು ಮತ್ತು ಪಶ್ವಿಮ ಘಟ್ಟ ಪ್ರದೇಶಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ತಿಳಿಸಿದೆ.