ಮುಳ್ಳೇರಿಯ: ಬೇಸಿಗೆಯ ಭೀಕರ ಪರಿಸ್ಥಿತಿಯಿಂದ ಜಲಮೂಲಗಳೆಲ್ಲ ಬತ್ತಿ ಬರಡಾಗಿರುವ ಸಂದರ್ಭದಲ್ಲೂ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣಾ ಇಲಾಖೆಯು ಒಳಕಾಡುಗಳಲ್ಲಿರುವ ವನ್ಯಪ್ರಾಣಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿ ಗಮನ ಸೆಳೆದಿದೆ. ಈ ಹಿಂದೆ ಕಾಸರಗೋಡು ಜಿಲ್ಲೆಯ ಕಾಡುಗಳಲ್ಲಿ ನೈಸರ್ಗಿಕ ಚಿಲುಮೆಗಳನ್ನು ಹುಡುಕಿ ರಕ್ಷಿಸುವ ಕೆಲಸ ಮಾಡಲಾಗಿತ್ತು. ಬೇಸಿಗೆಯಲ್ಲಿ ಚಿಲುಮೆಗಳೂ ಬತ್ತಿರುವ ಕಾರಣ ಕಾಡು ಪ್ರಾಣಿಗಳಿಗೆ ಕುಡಿಯುವ ನೀರು ಒದಗಿಸಲು ಚೆಕ್ ಡ್ಯಾಂಗಳನ್ನು ಸಹ ಸಿದ್ಧಪಡಿಸಲಾಗಿದೆ. ಕಾಸರಗೋಡು ಅರಣ್ಯ ವಿಭಾಗದ ವ್ಯಾಪ್ತಿಯ ಎಲ್ಲ ಹೊಳೆ, ಹೊಂಡಗಳನ್ನು ಸ್ವಚ್ಛಗೊಳಿಸಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.
ಕಡಿಪಳ್ಳಂ ಚೆಕ್ ಡ್ಯಾಂ, ಕೊಟ್ಯಾಡಿ ಕೆರೆ, ಪರಪ್ಪ ವಿಭಾಗದ ತೋಣಿಕಡವ್ ಹೊಳೆ, ತೋಣಿಕಡವಿನ ಹೊಸ ಚೆಕ್ ಡ್ಯಾಂ, ಮಯ್ಯಾಳ ಚೆಕ್ ಡ್ಯಾಂ, ಸಾಮೆಕೊಚ್ಚಿ ಚೆಕ್ ಡ್ಯಾಂ,ಸಾಮೆಕೊಚ್ಚಿ-ಕವಡಿಕ್ಕಾನ ಚೆಕ್ ಡ್ಯಾಂ, ಮಾಡತ್ತಡ್ಕ ಕೆರೆ, ಬಳವಂತ್ತಡ್ಕ ಹೊಳೆ, ಕಲ್ಪಕ್ಕೊಚ್ಚಿ-ತಲಯಡ್ಕ ಕೆರೆ, ಚೆಕ್‍ಡ್ಯಾಂ, ಕಾಟ್ಟಿಪ್ಪಾರೆ ಕೆರೆ, ಪಲ್ಲಂಜಿ ಪೈಪ್ ಸೇತುವೆ, ಬಲವಂತ್ತಡ್ಕ ಮೂಲೆ ಕೆರೆ, ನೇರೋಡಿ ಕೆರೆ, ಕಕ್ಕಪಾಡಿ ಕೆರೆ, ರಾಣಿಪುರಂ ಕೆರೆ ಇತ್ಯಾದಿ ಕಡೆಗಳ ಕಾಡುಗಳಲ್ಲಿ ಜಲ ಸೌಕರ್ಯ ರೂಪಿಸಿ ವ್ಯವಸ್ಥೆಗೊಳಿಸಲಾಗಿದೆ. ವನ್ಯಜೀವಿಗಳಿಗೆ ಸಂಘರ್ಷ ವಲಯಗಳನ್ನು ತಪ್ಪಿಸುವುದರಿಂದ ತಾಪಮಾನ ಏರಿಕೆಯ ಸಮಯದಲ್ಲಿ ವನ್ಯಜೀವಿಗಳಿಗೆ ಬಾಯಾರಿದಾಗ ನೀರನ್ನು ಖಚಿತಪಡಿಸಿಕೊಳ್ಳಲು ಇದು ನೆರವಾಗಿದೆ.
ವಿಭಾಗೀಯ ಅರಣ್ಯಾಧಿಕಾರಿ ಕೆ. ಅಶ್ರಫ್ ನೇತೃತ್ವದಲ್ಲಿ ವ್ಯಾಪಕ ಬೇಸಿಗೆ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ.