ಗಡಿ ರಸ್ತೆಗಳ ಸಂಸ್ಥೆ (BRO: Border Roads Organisation) ತನ್ನ 65 ನೇ ಸಂಸ್ಥಾಪನಾ ದಿನವನ್ನು ಮೇ 7ರಂದು ಆಚರಿಸಿಕೊಂಡಿತು. ಭಾರತದ ಗಡಿ ಪ್ರದೇಶಗಳಲ್ಲಿ ರಸ್ತೆ ಜಾಲಗಳನ್ನು ಅಭಿವೃದ್ಧಿಪಡಿಸುವ ಮತ್ತು ನಿರ್ವಹಿಸುವ ಉದ್ದೇಶದಿಂದ ಮೇ 7, 1960 ರಂದು ಸ್ಥಾಪಿತವಾದ BRO ರಕ್ಷಣಾ ಸಚಿವಾಲಯದಡಿ 'ಬಾರ್ಡರ್ ರೋಡ್ಸ್ ಡೆವಲಪ್‌ಮೆಂಟ್ ಬೋರ್ಡ್' (BRDB) ಅಧೀನದಲ್ಲಿ ಕಾರ್ಯನಿರ್ವಹಿಸುತ್ತದೆ.
ಆರಂಭದಲ್ಲಿ 'ಪ್ರಾಜೆಕ್ಟ್ ಟಸ್ಕರ್' (ಈಗ ವರ್ತಕ್) ಮತ್ತು ಉತ್ತರ ಭಾರತದಲ್ಲಿ 'ಪ್ರಾಜೆಕ್ಟ್ ಬೀಕನ್' ಎಂಬ ಎರಡು ಯೋಜನೆಗಳ ಜವಾಬ್ದಾರಿಯನ್ನು ಈ ಸಂಸ್ಥೆಗೆ ವಹಿಸಲಾಗಿತ್ತು. ಈಗ BRO, 11 ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಿರ್ಮಾಣ ಮತ್ತು ನಿರ್ವಹಣಾ ಕಾರ್ಯನಿರ್ವಹಿಸುತ್ತಿದೆ. ದೂರದ ಪ್ರದೇಶಗಳಲ್ಲಿ ರಾಷ್ಟ್ರೀಯ ಭದ್ರತೆ ಮತ್ತು ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡುವ ರಸ್ತೆ ಜಾಲಗಳನ್ನು BRO ಅಭಿವೃದ್ಧಿಪಡಿಸುತ್ತದೆ. ಹಿಮಾಲಯದಂಥ ಸವಾಲಿನ ಭೂಪ್ರದೇಶದಲ್ಲೂ ರಸ್ತೆಗಳು, ಸೇತುವೆಗಳು ಮತ್ತು ವಾಯುನೆಲೆಗಳನ್ನು ನಿರ್ಮಿಸಿ, ನಿರ್ವಹಿಸುವ ಮೂಲಕ BRO ಸೈ ಎನಿಸಿಕೊಂಡಿದೆ. BRO ಇಲ್ಲಿಯವರೆಗೆ 62,214 ಕಿ.ಮೀ. ಉದ್ದದ ರಸ್ತೆಗಳು, 1005 ಸೇತುವೆಗಳು, ಏಳು ಸುರಂಗಗಳು ಮತ್ತು 21 ವಾಯುನೆಲೆಗಳನ್ನು ನಿರ್ಮಿಸಿದೆ.
BRO ಭಾರತದ ಗಡಿಯೊಳಗೆ ಮಾತ್ರವಲ್ಲದೇ, ಭೂತಾನ್, ಮ್ಯಾನ್ಮಾರ್, ಅಫ್ಘಾನಿಸ್ತಾನ್ ಮತ್ತು ತಜಿಕಿಸ್ತಾನ್‌ನಂಥ ಸ್ನೇಹಿತ ರಾಷ್ಟ್ರಗಳಲ್ಲೂ ರಸ್ತೆ, ಸೇತುವೆಗಳನ್ನು ನಿರ್ಮಿಸಿದೆ. BRO ಸಿಲ್ಕ್ಯಾರಾ ಸುರಂಗ ಕುಸಿತ ಮತ್ತು ಸಿಕ್ಕಿಂ ಪ್ರವಾಹದಂಥ ತುರ್ತು ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳಲ್ಲೂ ಅತಿ ವೇಗವಾಗಿ ರಸ್ತೆ ಮತ್ತು ಸೇತುವೆಗಳನ್ನು ನಿರ್ಮಿಸಿ ಪರಿಹಾರ ಕಾರ್ಯಾಚರಣೆಯ ತಂಡಗಳು ಹಾಗೂ ಸಾಮಗ್ರಿಗಳು ಸಾಗಲು ಅನುವು ಮಾಡಿಕೊಟ್ಟದ್ದು ಪ್ರಶಂಸಾರ್ಹ ಕಾರ್ಯವಾಗಿದೆ. 2022-23 ರಲ್ಲಿ ಒಂದೇ ವರ್ಷದಲ್ಲಿ 103 ಮೂಲಸೌಕರ್ಯ ಯೋಜನೆಗಳನ್ನು ಪೂರ್ಣಗೊಳಿಸಿದ್ದು, BRO ದ ಅಪ್ರತಿಮ ಕಾರ್ಯನಿರ್ವಹಣಾ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ.
BRO ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣಕ್ಕೂ ಆದ್ಯತೆ ನೀಡಿದ್ದು, ಕರ್ನಲ್ ಪೊನುಂಗ್ ಡೊಮಿಂಗ್ ಮತ್ತು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ನಿಖಿತಾ ಚೌಧರಿ BRO ದಲ್ಲಿನ ಮಹಿಳಾ ಶಕ್ತಿಗೆ ಉದಾಹರಣೆಯಾಗಿದ್ದಾರೆ.
BRO ಕೈಗೊಂಡ ಕೆಲ ಗಮನಾರ್ಹ ಯೋಜನೆಗಳುಅಟಲ್ ಟನಲ್ (ರೋಹ್ತಾಂಗ್ ಟನಲ್): ಇದು ಹಿಮಾಚಲ ಪ್ರದೇಶದಲ್ಲಿ 3,000 ಮೀಟರ್ ಎತ್ತರದಲ್ಲಿ ನಿರ್ಮಿಸಲಾದ ವಿಶ್ವದ ಅತಿ ಉದ್ದದ ಹೆದ್ದಾರಿ ಸುರಂಗವಾಗಿದೆ (9.02 ಕಿಮೀ). ಇದು ಮನಾಲಿ ಮತ್ತು ಲಾಹೌಲ್-ಸ್ಪಿತಿ ನಡುವೆ ಎಲ್ಲಾ ಹವಾಮಾನ ಸಂದರ್ಭಗಳಲ್ಲೂ ಸಂಪರ್ಕವನ್ನು ಒದಗಿಸುತ್ತದೆ.
ದೇಲರಾಮ್-ಝರಂಜ್ ಹೆದ್ದಾರಿ: ಅಫ್ಘಾನಿಸ್ತಾನದಲ್ಲಿ 2009 ರಲ್ಲಿ ನಿರ್ಮಿಸಲಾದ 218 ಕಿ.ಮೀ. ಉದ್ದದ ರಸ್ತೆ ಇದಾಗಿದ್ದು, ಇರಾನ್ ಗಡಿಯ ಸಮೀಪವಿರುವ ಝರಂಜ್ ಜೊತೆ ಡೆಲಾರಾಮ್ ಅನ್ನು ಇದು ಸಂಪರ್ಕಿಸುತ್ತದೆ.
ಧೋಲಾ-ಸಾದಿಯಾ ಸೇತುವೆ: ಅಸ್ಸಾಂ ಮತ್ತು ಅರುಣಾಚಲ ಪ್ರದೇಶವನ್ನು ಸಂಪರ್ಕಿಸುವ ಅಸ್ಸಾಂನ ಲೋಹಿತ್ ನದಿಯ ಮೇಲೆ ನಿರ್ಮಿಸಲಾದ ಭಾರತದ ಅತಿ ಉದ್ದದ ನದಿ ಸೇತುವೆ (9.15 ಕಿಮೀ) ಇದಾಗಿದೆ.
ಉಮ್ಲಿಂಗ್ ಲಾ ಪಾಸ್: ಪೂರ್ವ ಲಡಾಖ್‌ನಲ್ಲಿ 19,300 ಅಡಿ ಎತ್ತರದಲ್ಲಿ ನಿರ್ಮಿಸಲಾದ ವಿಶ್ವದ ಅತಿ ಎತ್ತರದ ಮೋಟಾರು ರಸ್ತೆ ಇದಾಗಿದ್ದು, ಖರ್ದುಂಗ್ ಲಾ ಪಾಸ್ ಹೊಂದಿದ್ದ ಹಿಂದಿನ ದಾಖಲೆಯನ್ನು ಇದು ಮೀರಿಸಿದೆ.
ಬ್ರಾಂಗ್ಜಾ ಸೇತುವೆ: ಶೋಕ್ ನದಿಯ ಮೇಲೆ BRO ನಿರ್ಮಿಸಿರುವ ಬ್ರಾಂಗ್ಜಾ ಸೇತುವೆಯನ್ನು ಲಂಡನ್‌ನ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ವಿಶ್ವದ ಅತಿ ಎತ್ತರದ ಮಲ್ಟಿ ಸ್ಪ್ಯಾನ್ ಸೇತುವೆ ಎಂದು ಗುರುತಿಸಿದೆ. ಈ ಸೇತುವೆಯನ್ನು 14900 ಅಡಿ ಎತ್ತರದಲ್ಲಿ ಕೇವಲ 174 ದಿನಗಳಲ್ಲಿ ನಿರ್ಮಿಸಲಾಗಿದೆ. ಇದು ಲಡಾಖ್‌ನಲ್ಲಿ ಕಾರ್ಯತಂತ್ರದ ಸಂಪರ್ಕವನ್ನು ಒದಗಿಸುತ್ತದೆ.
ಬಿಲಾಫೊಂಡ್ ಲಾ ಪಾಸ್: ಲಡಾಖ್‌ನಲ್ಲಿ ಎತ್ತರದ ಪರ್ವತ ಪಾಸ್ ಇದಾಗಿದೆ. ಇಲ್ಲಿ BRO 17,500 ಅಡಿ ಎತ್ತರದಲ್ಲಿ ಮೋಟಾರು ರಸ್ತೆಯನ್ನು ನಿರ್ಮಿಸಿದೆ.
ಸೇಲಾ ಸುರಂಗ: ₹825 ಕೋಟಿ ವೆಚ್ಚದಲ್ಲಿ 13,700 ಅಡಿ ಎತ್ತರದಲ್ಲಿ ನಿರ್ಮಿಸಲಾದ ಈ ಸುರಂಗ ಅರುಣಾಚಲ ಪ್ರದೇಶದ ಪಶ್ಚಿಮ ಕಮೆಂಗ್ ಜಿಲ್ಲೆಯ ತೇಜ್‌ಪುರದಿಂದ ತವಾಂಗ್‌ಗೆ (ಬಲಿಪರಾ-ಚಾರ್ದ್ವಾರ್-ತವಾಂಗ್) ಎಲ್ಲ ಕಾಲಮಾನಗಳಲ್ಲೂ ಸಂಪರ್ಕ ಕಲ್ಪಿಸುತ್ತದೆ. ಈ ಸುರಂಗ 3,000 ಮೀಟರ್ (9,800 ಅಡಿ) ಉದ್ದದ ರಸ್ತೆ ಸುರಂಗವಾಗಿದೆ. ಈ ಸುರಂಗ ಭಾರತದ ಮಿಲಿಟರಿ ಅನುಕೂಲತೆಯನ್ನು ಹೆಚ್ಚಿಸಿದ್ದು, LAC ಸಮೀಪದ ಪ್ರದೇಶಗಳಿಗೆ ಸೈನಿಕರು, ಶಸ್ತ್ರಾಸ್ತ್ರಗಳು ಮತ್ತು ಯುದ್ಧೋಪಕರಣಗಳನ್ನು ತ್ವರಿತವಾಗಿ ನಿಯೋಜಿಸಲು ಅನುವು ಮಾಡಿಕೊಡುತ್ತದೆ. ಸೆಲಾ ಸುರಂಗವನ್ನು ಇಂಗ್ಲೆಂಡಿನ 'ಇಂಟರ್‌ನ್ಯಾಷನಲ್ ಬುಕ್ ಆಫ್ ಆನರ್' ಭಾರತದ ಅತಿ ಎತ್ತರದ ಸುರಂಗ ಎಂದು ಗುರುತಿಸಿದೆ.
ಕೈಲಾಸ-ಮಾನಸ ಸರೋವರ ರಸ್ತೆ: ಕೈಲಾಸ-ಮಾನಸ ಸರೋವರ ಯಾತ್ರಾ ಸ್ಥಳವನ್ನು ಸಂಪರ್ಕಿಸುವ ಭಾರತ-ಚೀನಾ ಗಡಿಯ ಬಳಿ ಲಿಪುಲೇಖ್ ಪಾಸ್‌ನಲ್ಲಿ 17,060 ಅಡಿ ಎತ್ತರದಲ್ಲಿ BRO ಮೋಟಾರು ರಸ್ತೆಯನ್ನು ನಿರ್ಮಿಸಿದೆ.
ಸಿಯೋಮ್ ಸೇತುವೆ: ಅರುಣಾಚಲ ಪ್ರದೇಶದ ಅಲಾಂಗ್-ಯಿನ್‌ಕಿಯಾಂಗ್ ನಡುವೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಸಿಯೋಮ್ ನದಿಗೆ ಅಡ್ಡಲಾಗಿ ಉಕ್ಕಿನ ಕಮಾನುಗಳ ನೆರವಿನಿಂದ ನಿರ್ಮಿಸಲಾದ 'ಸಿಯೋಮ್' ಸೇತುವೆ BRO ದ ಒಂದು ಅದ್ಭುತ ನಿರ್ಮಾಣವಾಗಿದೆ. 100 ಮೀಟರ್ ಉದ್ದದ ಈ ಸೇತುವೆಯನ್ನು 'ಕ್ಲಾಸ್ 70' ದರ್ಜೆಯ ಉಕ್ಕನ್ನು ಬಳಸಿ ನಿರ್ಮಿಸಲಾಗಿದೆ.
ಟೇಜಿಂಗ್ ಲಾಮೊ ಲೇಕ್ ರಸ್ತೆ: ಉತ್ತರ ಸಿಕ್ಕಿಂನ ತ್ಸೋ ಲಾಮೊ ಸರೋವರದ ಬಳಿ 17,000 ಅಡಿ ಎತ್ತರದಲ್ಲಿ ನಿರ್ಮಿಸಲಾದ ಎತ್ತರದ ರಸ್ತೆ ಇದಾಗಿದೆ.
ದರ್ಚಾ-ಪಡುಮ್-ನಿಮು ರಸ್ತೆ: ಹಿಮಾಚಲ ಪ್ರದೇಶದ ದರ್ಚಾದಿಂದ ಲಡಾಖ್‌ನ ನಿಮುಗೆ ಸಂಪರ್ಕ ಕಲ್ಪಿಸುವ 290 ಕಿ.ಮೀ. ಉದ್ದದ ರಸ್ತೆ ಇದಾಗಿದ್ದು, ಪ್ರಸ್ತುತ ನಿರ್ಮಾಣ ಹಂತದಲ್ಲಿದೆ. ಇದು ಲೇಹ್‌ಗೆ ಪರ್ಯಾಯ ಮಾರ್ಗವನ್ನು ಒದಗಿಸಲಿದೆ.
ಭಾರತ-ಚೀನಾ ಗಡಿ ರಸ್ತೆಗಳು: ಗಡಿ ಸಂಪರ್ಕ ಮತ್ತು ರಕ್ಷಣಾ ಸನ್ನದ್ಧತೆಯನ್ನು ಹೆಚ್ಚಿಸಲು ಅರುಣಾಚಲ ಪ್ರದೇಶ, ಸಿಕ್ಕಿಂ, ಉತ್ತರಾಖಂಡ ಮತ್ತು ಲಡಾಖ್‌ನಂಥ ರಾಜ್ಯಗಳಲ್ಲಿ ಭಾರತ-ಚೀನಾ ಗಡಿಯಲ್ಲಿ BRO ಆಯಕಟ್ಟಿನ ಸ್ಥಳಗಳಲ್ಲಿ ರಸ್ತೆಗಳ ಜಾಲವನ್ನು ನಿರ್ಮಿಸಿ, ನಿರ್ವಹಿಸುತ್ತಿದೆ.
ಶಿಂಕುನ್ ಲಾ ಸುರಂಗ: BRO ದ ಮುಂಬರುವ ಮಹತ್ವದ ಯೋಜನೆ ಎಂದರೆ ಶಿಂಕುನ್ ಲಾ ಸುರಂಗ. ಇದು ಪೂರ್ಣಗೊಂಡ ನಂತರ 15,800 ಅಡಿ ಎತ್ತರದಲ್ಲಿರುವ ಮತ್ತು ಚೀನಾದ ಮಿಲಾ ಸುರಂಗವನ್ನು ಮೀರಿಸುವ ವಿಶ್ವದ ಅತಿ ಎತ್ತರದ ಸುರಂಗವಾಗಲಿದೆ. 4.10 ಕಿ.ಮೀ. ದೂರ ವ್ಯಾಪಿಸುವ ಈ ಸುರಂಗವು ಲಡಾಖ್ ಮತ್ತು ಲಾಹೌಲ್ ಮತ್ತು ಸ್ಪಿತಿ ಪ್ರದೇಶಗಳ ನಡುವಿನ ಸಾರ್ವಕಾಲಿಕ ಸಂಪರ್ಕವನ್ನು ಖಾತ್ರಿಗೊಳಿಸುವ ಗುರಿಯನ್ನು ಹೊಂದಿದೆ.
ಪ್ರಾಜೆಕ್ಟ್ ಸಂಪರ್ಕ್: ಜಮ್ಮು ಮತ್ತು ಕಾಶ್ಮೀರದ ಅಖ್ನೂರ್‌ನಿಂದ ಪೂಂಚ್‌ಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 144A ನಲ್ಲಿ 'ಸುಂಗಲ್ ಸುರಂಗ' ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಈ ಸುರಂಗ 2.79 ಕಿಮೀ ಉದ್ದವಿರಲಿದೆ. ಇದು ಪೂರ್ಣಗೊಂಡ ನಂತರ ರಾಜೌರಿ ಮತ್ತು ಪೂಂಚ್ ನಡುವಿಣ ಪ್ರಯಾಣದ ಸಮಯ ಮತ್ತು ದೂರವನ್ನು ಗಣನೀಯವಾಗಿ ಕಡಿಮೆ ಮಾಡಲಿದೆ.
BRO ತನ್ನ ಕಾರ್ಯಾಚರಣೆಗಳಲ್ಲಿ ಸುಧಾರಿತ ತಂತ್ರಜ್ಞಾನಗಳು ಮತ್ತು ಯಾಂತ್ರೀಕರಣವನ್ನು ಹೆಚ್ಚಿನ ಪ್ರಮಾಣದಲ್ಲಿ ಸಂಯೋಜಿಸುವತ್ತ ಗಮನಹರಿಸುತ್ತಿದೆ. ಕಾರ್ಯತಂತ್ರದ ದಕ್ಷತೆಯನ್ನು ಹೆಚ್ಚಿಸುವುದು ಮತ್ತು ಯೋಜನೆಯ ಅನುಷ್ಠಾನದಲ್ಲಿ ಸುರಕ್ಷತೆ ಕಾಪಾಡಿಕೊಳ್ಳುವುದು, ಯೋಜನೆಗಳನ್ನು ಸಮಯೋಚಿತವಾಗಿ ಪೂರ್ಣಗೊಳಿಸುವುದನ್ನು ಇದು ಖಾತ್ರಿಪಡಿಸುತ್ತದೆ.