ಜಿನೀವಾ: ಭಾರತದ ವ್ಯಂಗ್ಯಚಿತ್ರ ಕಲಾವಿದೆ ರಚಿತಾ ತನೇಜಾ ಹಾಗೂ ಹಾಂಗ್‌ಕಾಂಗ್‌ನ ಜುಂಜಿ ಅವರಿಗೆ 'ಕೋಫಿ ಅನ್ನಾನ್ ಕರೇಜ್ ಇನ್ ಕಾರ್ಟೂನಿಂಗ್' ಪ್ರಶಸ್ತಿಯನ್ನು ಘೋಷಿಸಲಾಗಿದೆ.
ಎರಡು ವರ್ಷಕ್ಕೊಮ್ಮೆ ನೀಡಲಾಗುವ ಈ ಪ್ರಶಸ್ತಿಯನ್ನು 'ಅಂತರರಾಷ್ಟ್ರೀಯ ಪತ್ರಿಕಾ ಸ್ವಾತಂತ್ರ್ಯ ದಿನ'ವಾದ ಶುಕ್ರವಾರ ಈ ಪ್ರದಾನ ಮಾಡಲಾಯಿತು.
ರಚಿತಾ ತನೇಜಾ ಅವರು 'ಸ್ಯಾನಿಟರಿ ಪ್ಯಾನೆಲ್ಸ್' ಎಂಬ ಆನ್‌ಲೈನ್ ವೇದಿಕೆಯನ್ನು ಮುನ್ನಡೆಸುತ್ತಿದ್ದು, ಕಿರುಕುಳ, ಸಲಿಂಗಕಾಮ ಕುರಿತು ನಕಾರಾತ್ಮಕತೆ, ಮುಟ್ಟು ಹಾಗೂ ಸರ್ವಾಧಿಕಾರ ಸೇರಿದಂತೆ ವಿವಿಧ ವಿಷಯಗಳ ಕುರಿತು ವಿಡಂಬನಾತ್ಮಕ ಚಿತ್ರಗಳನ್ನು ಪ್ರಕಟಿಸುತ್ತಾರೆ. ಅವರ ಆನ್‌ಲೈನ್ ವೇದಿಕೆ ವಿರುದ್ಧ ಭಾರತದಲ್ಲಿನ ಆಡಳಿತಾರೂಢ ಬಿಜೆಪಿಯ ವಿದ್ಯಾರ್ಥಿ ಘಟಕ ದೂರು ನೀಡಿತ್ತು.
ಒಂದು ವೇಳೆ, ಈ ದೂರನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಲ್ಲಿ, ತನೇಜಾ ಅವರು 6 ತಿಂಗಳು ಜೈಲುಶಿಕ್ಷೆ ಅನುಭವಿಸಬೇಕಾಗುತ್ತದೆ.
ಚೀನಾ, ಕಠಿಣವಾದ ರಾಷ್ಟ್ರೀಯ ಭದ್ರತಾ ಕಾಯ್ದೆಯನ್ನು ಅನುಷ್ಠಾನಕ್ಕೆ ತಂದ ಮೂರು ವರ್ಷಗಳ ನಂತರ, 2003ರಲ್ಲಿ ಜುಂಜಿ ಅವರನ್ನು ಅವರು ಕಾರ್ಯನಿರ್ವಹಿಸುತ್ತಿದ್ದ ಪತ್ರಿಕಾ ಸಂಸ್ಥೆಯು ಕೆಲಸದಿಂದ ವಜಾಗೊಳಿಸಿತ್ತು.
ಹಾಂಗ್‌ಕಾಂಗ್‌ನ ಕಲೆ, ಸಂಸ್ಕೃತಿ ಮತ್ತು ಮಾಧ್ಯಮಗಳ ಕುರಿತು ಜುಂಜಿ ಅವರು ಪ್ರಕಟಿಸುತ್ತಿದ್ದ ವ್ಯಂಗ್ಯಚಿತ್ರಗಳು 'ತಿರುಚಿದ ಹಾಗೂ ಅನೈತಿಕ'ವಾಗಿರುತ್ತವೆ ಎಂಬುದು ಅಧಿಕಾರಿಗಳ ದೂರು ಆಗಿತ್ತು.
ಪ್ರಶಸ್ತಿ ಪ್ರದಾನ ಸಮಾರಂಭದ ಅಂಗವಾಗಿ ಹಮ್ಮಿಕೊಂಡಿದ್ದ ವ್ಯಂಗ್ಯಚಿತ್ರಗಳ ಪ್ರದರ್ಶನವನ್ನು ಇರಾನ್‌ನ ವಕೀಲೆ ಹಾಗೂ ನೊಬೆಲ್ ಶಾಂತಿ ಪುರಸ್ಕಾರ ಪುರಸ್ಕೃತರಾದ ಶಿರಿನ್ ಎಬಾದಿ ಉದ್ಘಾಟಿಸಿದರು.
'ಸ್ವಾತಂತ್ರ್ಯಕ್ಕಾಗಿನ ಹೋರಾಟದಲ್ಲಿ ಮಹಿಳೆಯರ ಪಾತ್ರ ಹಾಗೂ ಜಾಗತಿಕವಾಗಿ ಮಹಿಳಾ ವ್ಯಂಗ್ಯಚಿತ್ರಕಾರ್ತಿಯರು ಎದುರಿಸುತ್ತಿರುವ ಸವಾಲುಗಳು' ಎಂಬ ವಿಷಯದ ಮಹತ್ವವನ್ನು ಈ ವರ್ಷದ ಪ್ರಶಸ್ತಿ ಮತ್ತು ವ್ಯಂಗ್ಯಚಿತ್ರ ಪ್ರದರ್ಶನ ವಿವರಿಸುತ್ತದೆ' ಎಂದು ಸಂಘಟಕ ಸಂಸ್ಥೆ ಫ್ರೀಡಮ್ ಕಾರ್ಟೂನಿಸ್ಟ್ಸ್ ಫೌಂಡೇಷನ್ ಹೇಳಿದೆ.
ವ್ಯಂಗ್ಯಚಿತ್ರಗಳ ಪ್ರದರ್ಶನ ಜೂನ್ 2ರ ವರೆಗೆ ನಡೆಯಲಿದೆ.