ಥಳಿತಕ್ಕೊಳಗಾಗಿದ್ದ ಇಬ್ಬರು ಪುರುಷರೂ, ಅದೇ ವೇಳೆ ವಾಹನವೇರಿದ್ದರು. ಕಿಡಿಗೇಡಿಗಳು ಅವರೆನ್ನಲ್ಲ ಹೊರಗೆಳೆದುಕೊಂಡು ಮತ್ತಷ್ಟು ಹಲ್ಲೆಗೆ ಮುಂದಾಗುತ್ತಿದ್ದಂತೆ, ಪೊಲೀಸರು ಜಾಗ ಖಾಲಿ ಮಾಡಿದ್ದರು ಎಂದೂ ಆರೋಪಪಟ್ಟಿಯಲ್ಲಿ ದಾಖಲಿಸಲಾಗಿದೆ.
ಕಾನೂನು ಸಂಘರ್ಷಕ್ಕೊಳಪಟ್ಟ ಒಬ್ಬ ಬಾಲಕ ಸೇರಿದಂತೆ ಒಟ್ಟು ಆರು ಮಂದಿಯ ವಿರುದ್ಧ ಕಳೆದ (2023ರ) ಅಕ್ಟೋಬರ್‌ನಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಸಿಬಿಐ, ಈ ಸಂಬಂಧ ಗುವಾಹಟಿ ವಿಶೇಷ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದೆ.
ಸಂತ್ರಸ್ತರಿಗೆ ನೆರವಾಗಲು ನಿರಾಕರಿಸಿದ ಪೊಲೀಸರ ವಿರುದ್ಧ ಇಲಾಖಾ ಕ್ರಮ ಕೈಗೊಳ್ಳಲಾಗಿದೆ. ಆದರೆ, ಸಿಬಿಐ ತನಿಖೆ ಪ್ರಗತಿಯಲ್ಲಿರುವುದರಿಂದ ಅಪರಾಧ ಪ್ರಕರಣದಡಿ ಕ್ರಮ ಕೈಗೊಂಡಿಲ್ಲ ಎಂದು ಮಣಿಪುರ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ರಾಜೀವ್ ಸಿಂಗ್ ತಿಳಿಸಿದ್ದಾರೆ.
20 ವರ್ಷ ಹಾಗೂ 40 ವರ್ಷ ಆಸುಪಾಸಿನ ಇಬ್ಬರು ಮಹಿಳೆಯರ ಮೇಲಿನ ದೌರ್ಜನ್ಯದ ವಿಡಿಯೊಗಳು ಕಳೆದ ವರ್ಷ ಜುಲೈನಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದವು. ಪುರುಷರ ಗುಂಪು ಅವರನ್ನು ಎಳೆದಾಡಿ, ಲೈಂಗಿಕ ದೌರ್ಜನ್ಯವೆಸಗುತ್ತಿರುವ ದೃಶ್ಯಗಳು ಅವುಗಳಲ್ಲಿದ್ದವು.
ಸಂತ್ರಸ್ತರ ಕುಟುಂಬದವರು ಕಿಡಿಗೇಡಿಗಳಿಂದ ತಪ್ಪಿಸಿಕೊಳ್ಳಲು ಕಾಡಿನತ್ತ ಓಡಿದರೂ, ದಾಳಿಕೋರರು ಮಾರಾಕಾಸ್ತ್ರಗಳನ್ನು ಹಿಡಿದು ಹಿಂಬಾಲಿಸಿದ್ದರು. ಕಾಡಿನೊಳಗೆ ಹೊಕ್ಕಿದ್ದವರನ್ನೆಲ್ಲ ಬಲವಂತವಾಗಿ ರಸ್ತೆಗೆ ಎಳೆದುತಂದಿದ್ದರು. ಸಂತ್ರಸ್ತೆಯರಿಬ್ಬರನ್ನು ಒಂದು ಕಡೆ, ಇನ್ನಿಬ್ಬರು ಮಹಿಳೆಯರು, ಅವರ ತಂದೆ ಹಾಗೂ ಗ್ರಾಮದ ಯಜಮಾನನನ್ನು ಇನ್ನೊಂದು ಕಡೆ ನಿಲ್ಲಿಸಿ ಕಿರುಕುಳ ನೀಡಲಾರಂಭಿಸಿದ್ದರು ಎಂದು ಸಿಬಿಐ ಹೇಳಿದೆ.
ಈ ವೇಳೆ ಸಂತ್ರಸ್ತರು ರಕ್ಷಣೆಗಾಗಿ ಪೊಲೀಸ್ ವಾಹನದೊಳಕ್ಕೆ ನುಗ್ಗಿದ್ದರು. ವಾಹನ ಚಾಲನೆ ಮಾಡುವಂತೆ, ತಮಗೆ ರಕ್ಷಣೆ ನೀಡುವಂತೆ ಪೊಲೀಸರನ್ನು ಬೇಡಿಕೊಂಡಿದ್ದರು. ಆದರೆ, 'ಕೀ ಇಲ್ಲ' ಎನ್ನುವ ಮೂಲಕ ಪೊಲೀಸರು ನೆರವಾಗಲು ನಿರಾಕರಿಸಿದ್ದರು. ಆದಾಗ್ಯೂ ಇದ್ದಕ್ಕಿದ್ದಂತೆ ಕಾರು ಚಾಲನೆ ಮಾಡಿದ ಚಾಲಕ, ಸಾವಿರಾರು ಸಂಖ್ಯೆಯಲ್ಲಿದ್ದ ಉದ್ರಿಕ್ತರ ಸಮೀಪವೇ ವಾಹನ ನಿಲ್ಲಿಸಿದ್ದ. ಭಯಗೊಂಡ ಸಂತ್ರಸ್ತರು, ವಾಹನ ಚಾಲನೆ ಮಾಡುವಂತೆ ಮತ್ತೆ ಅಂಗಲಾಚಿದ್ದರು. ಈ ಮಧ್ಯೆ, ಸಂತ್ರಸ್ತ ಮಹಿಳೆಯ ತಂದೆಯನ್ನು ಹತ್ಯೆ ಮಾಡಲಾಗಿತ್ತು. ಬಳಿಕ, ವಾಹನದಲ್ಲಿದ್ದವರನ್ನು ಹೊರಗೆಳೆದು ಹಲ್ಲೆ ನಡೆಸಿದ್ದರು. ಅಷ್ಟರಲ್ಲಿ ಪೊಲೀಸರು ಅಲ್ಲಿಂದ ಹೊರಟಿದ್ದರು. ನಂತರ ಉದ್ರಿಕ್ತರ ಗುಂಪು ಇಬ್ಬರು ಮಹಿಳೆಯರನ್ನು ವಿವಸ್ತ್ರಗೊಳಿಸಿ, ಪುರುಷರ ಮೇಲೆ ಹಲ್ಲೆ ನಡೆಸಿತ್ತು ಎಂದು ತಿಳಿಸಲಾಗಿದೆ.