ಕೋಲ್ಕತ್ತ: ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಪಶ್ಚಿಮ ಬಂಗಾಳ ರಾಜ್ಯಪಾಲ ಸಿ.ವಿ. ಆನಂದ ಬೋಸ್ ಅವರು ರಾಜಭವನದ ಆವರಣದ ಮೇ 2ರ ಸಿಸಿಟಿವಿ ದೃಶ್ಯಾವಳಿಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿದ್ದಾರೆ.
ಕೋಲ್ಕತ್ತ: ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಪಶ್ಚಿಮ ಬಂಗಾಳ ರಾಜ್ಯಪಾಲ ಸಿ.ವಿ. ಆನಂದ ಬೋಸ್ ಅವರು ರಾಜಭವನದ ಆವರಣದ ಮೇ 2ರ ಸಿಸಿಟಿವಿ ದೃಶ್ಯಾವಳಿಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿದ್ದಾರೆ.
100ಕ್ಕೂ ಹೆಚ್ಚು ಸಾರ್ವಜನಿಕರ ಎದುರಿಗೆ ರಾಜಭವನದ ಪ್ರಧಾನ ಗೇಟ್‌ನಲ್ಲಿ ಅಳವಡಿಸಿರುವ ಸಿಸಿಟಿವಿಯಲ್ಲಿ ಸೆರೆಯಾದ ಮೇ 2, ಸಂಜೆ 5.30ರ ದೃಶ್ಯಗಳನ್ನು ಪ್ರಸಾರ ಮಾಡಲಾಗಿದೆ.
ರಾಜಕಾರಣಿ ಮಮತಾ ಬ್ಯಾನರ್ಜಿ ಮತ್ತು ಅವರ ಪೊಲೀಸರನ್ನು ಹೊರತುಪಡಿಸಿ ಸಾಮಾನ್ಯ ಜನರಿಗೆ ಸಿಸಿಟಿವಿ ದೃಶ್ಯಾವಳಿಗಳನ್ನು ತೋರಿಸುವುದಾಗಿ ಬೋಸ್ ಬುಧವಾರ ಹೇಳಿದ್ದರು.
ರಾಜ್ಯಪಾಲ ಸಿ.ವಿ. ಆನಂದ ಬೋಸ್ ಅವರು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಪಶ್ಚಿಮ ಬಂಗಾಳದ ರಾಜಭವನದ ಮಹಿಳಾ ನೌಕರರೊಬ್ಬರು ಕೋಲ್ಕತ್ತ ಪೊಲೀಸ್ ಠಾಣೆಯಲ್ಲಿ ಕಳೆದ ಶುಕ್ರವಾರ (ಮೇ 3) ದೂರು ದಾಖಲಿಸಿದ್ದರು.
ಮಹಿಳೆಯು ಪೊಲೀಸ್ ಠಾಣೆಗೆ ದೂರು ನೀಡಿದ ನಂತರ ರಾಜಭವನವು ಪ್ರಕಟಣೆ ಹೊರಡಿಸಿ, 'ಇದೊಂದು ಸಂಚು. ನನ್ನ ಹೆಸರಿಗೆ ಕಳಂಕ ತಂದು, ಯಾರಾದರೂ ಚುನಾವಣಾ ಲಾಭ ಪಡೆಯಬಹುದು ಎಂದುಕೊಂಡಿದ್ದರೆ ದೇವರು ಅಂತಹವರಿಗೆ ಒಳ್ಳೆಯದನ್ನು ಮಾಡಲಿ' ಎಂದು ರಾಜ್ಯಪಾಲ ಸಿ.ವಿ. ಆನಂದ ಬೋಸ್ ಪ್ರಕಟಣೆಯಲ್ಲಿ ಪ್ರತಿಕ್ರಿಯಿಸಿದ್ದರು.