ಲಖನೌ: ಉತ್ತರ ಭಾರತದಲ್ಲಿ ಬೇಸಿಗೆ ಧಗೆಗೆ ಜನರೂ ಸೇರಿದಂತೆ ಪ್ರಾಣಿ ಪಕ್ಷಿಗಳು ಹೈರಾಣಾಗಿ ಹೋಗಿದ್ದು, ಹೀಟ್ ಸ್ಟ್ರೋಕ್ ಸಿಲುಕಿ ಪ್ರಜ್ಞೆ ಇಲ್ಲದೇ ಬಿದ್ದು ಸಾವಿನ ದವಡೆಯಲ್ಲಿದ್ದ ಕೋತಿಯೊಂದನ್ನು ಸ್ಥಳೀಯ ಪೊಲೀಸರೊಬ್ಬರು ರಕ್ಷಿಸಿರುವ ವಿಡಿಯೋವೊಂದು ವ್ಯಾಪಕ ವೈರಲ್ ಆಗುತ್ತಿದೆ.
ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಛತಾರಿ ಪೊಲೀಸ್ ಠಾಣೆಯ ಆವರಣದಲ್ಲಿ ಮರದ ಮೇಲಿದ್ದ ಕೋತಿಯೊಂದು ಹೀಟ್ ಸ್ಟ್ರೋಕ್ ನಿಂದಾಗಿ ಕೆಳಗೆ ಬಿದ್ದಿದೆ.
ಇದನ್ನು ಗಮನಿಸಿದ ಹೆಡ್ ಕಾನ್‌ಸ್ಟೆಬಲ್ ವಿಕಾಸ್ ತೋಮರ್ ಅವರು ಕೂಡಲೇ ಕೋತಿಗೆ CPR (ಕಾರ್ಡಿಯೋಪಲ್ಮನರಿ ರೆಸಸಿಟೇಶನ್) ಮಾಡಿದ್ದು, ಕೋತಿ ಬದುಕುಳಿಯುವಂತೆ ಮಾಡಿದ್ದಾರೆ. ಆರಂಭದಲ್ಲಿ ಕೋತಿ ಸತ್ತುಹೋಗಿದೆ ಎಂದು ಸಹೋದ್ಯೋಗಿಗಳು ಹೇಳಿದರೂ ಕೇಳದ ಪೇದೆ ವಿಕಾಸ್ ತೋಮರ್ ಅದಕ್ಕೆ ಖುದ್ಧು ಸಿಪಿಆರ್ ನೀಡಿ, ಅದರ ತಲೆ ಮೇಲೆ ನೀರು ಹಾಕಿ ಅದರ ಜೀವ ಉಳಿಸುವ ಪ್ರಯತ್ನ ಮಾಡಿದ್ದಾರೆ.
ಸಿಪಿಆರ್ ನೀಡಿದ ಬಳಿಕ ಕೋತಿ ಕೊಂಚ ಸುಧಾರಿಸಿಕೊಂಡಿದ್ದು, ಪ್ರಜ್ಞೆ ಮರಳಿದ ನಂತರ ಅದನ್ನು ಪಶುವೈದ್ಯ ಡಾ ಹರಿ ಓಂ ಶರ್ಮಾ ಅವರ ಬಳಿ ಕೊಂಡೊಯ್ದಿದ್ದಾರೆ. ವೈದ್ಯರು ಕೋತಿಗೆ ಆ್ಯಂಟಿ ಬಯಾಟಿಕ್ ಮತ್ತು ಇತರೆ ಔಷಧಿಗಳನ್ನು ನೀಡಿದಾಗ ಕೋತಿ ಸಾಮಾನ್ಯ ಸ್ಥಿತಿಗೆ ಮರಳಿದೆ.
ಇನ್ನು ಘಟನೆ ಕುರಿತು ಮಾತನಾಡಿದ ಪೇದೆ ವಿಕಾಸ್ ತೋಮರ್, 'ಇಂತಹ ತುರ್ತು ಪರಿಸ್ಥಿತಿಗಳನ್ನು ನಿಭಾಯಿಸುವ ಕುರಿತು ನಮಗೆ ತರಬೇತಿ ನೀಡಲಾಗಿರುತ್ತದೆ. ಮನುಷ್ಯರು ಮತ್ತು ಮಂಗಗಳ ದೇಹಗಳು ತುಂಬಾ ಹೋಲುವುದರಿಂದ, ನಾನು ಅದಕ್ಕೆ ಸಿಪಿಆರ್ ನೀಡಲು ಮುಂದಾದೆ.
ನಾನು ಸುಮಾರು 45 ನಿಮಿಷಗಳ ಕಾಲ ಎದೆಯನ್ನು ಉಜ್ಜಿ, ಒತ್ತಿದಾಗ ಅದರ ಹೃದಯ ಮತ್ತೆ ಚಲಿಸಲು ಆರಂಭಿಸಿತು. ಆಗ ಸ್ವಲ್ಪ ಪ್ರಮಾಣದ ನೀರನ್ನು ಬಾಯಿಗೆ ಸುರಿದಾಗ ಅದು ಕಣ್ಣು ಬಿಟ್ಟಿತು. ಕೂಡಲೇ ವೈದ್ಯರು ಚಿಕಿತ್ಸೆ ನೀಡಿದರು. ಈಗ ಕೋತಿ ಆರೋಗ್ಯ ಸುಧಾರಿಸಿದೆ' ಎಂದು ಹೇಳಿದ್ದಾರೆ.
ಇನ್ನು ಕೋತಿ ಪ್ರಾಣ ಉಳಿಸಿದ ಪೇದೆ ವಿಕಾಸ್ ತೋಮರ್ ಕಾರ್ಯಕ್ಕೆ ಇದೀಗ ಎಲ್ಲಡೆ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ.