ನವದೆಹಲಿ: ಬಾಂಗ್ಲಾದೇಶ ಮತ್ತು ಪಶ್ಚಿಮ ಬಂಗಾಳದ ಹಲವು ಪ್ರದೇಶಗಳಲ್ಲಿ ಭಾನುವಾರ ತಡರಾತ್ರಿ ತೀವ್ರತರವಾದ 'ರೀಮಲ್' ಚಂಡಮಾರುತ ಅಪ್ಪಳಿಸಿದೆ.
ಭಾರಿ ಗಾಳಿ ಮತ್ತು ಮಳೆಯಿಂದಾಗಿ ಬಾಂಗ್ಲಾದೇಶದಲ್ಲಿ 10, ಪಶ್ಚಿಮ ಬಂಗಾಳದಲ್ಲಿ 6 ಮಂದಿ ಸಾವು ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಶ್ಚಿಮ ಬಂಗಾಳದ ಕರಾವಳಿ ಪ್ರದೇಶದಲ್ಲಿ ಪ್ರತಿ ಗಂಟೆಗೆ 70ರಿಂದ 80 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದೆ. ಇದು ಸಂಜೆಯ ವೇಳೆಗೆ 50-70 ಕಿ.ಮೀ ಮತ್ತು ರಾತ್ರಿ 40 -50 ಕಿ.ಮೀ.ಗೆ ಕಡಿಮೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವುದರಿಂದ ಚಂಡಮಾರುತವು ಇನ್ನಷ್ಟು ತೀವ್ರಗೊಳ್ಳಲಿದೆ. ಹಾಗಾಗಿ ಮೀನುಗಾರರು ಬಂಗಾಳಕೊಲ್ಲಿಗೆ ಇಳಿಯದಂತೆ ಸೂಚಿಸಲಾಗಿದೆ ಎಂದು ಐಎಂಡಿ ತಿಳಿಸಿದೆ.
ಚಂಡಮಾರುತ: 1 ಲಕ್ಷ ಜನರ ಸ್ಥಳಾಂತರ
ರೀಮಲ್ ಚಂಡಮಾರುತದಿಂದ ಜೀವಹಾನಿ ಉಂಟಾಗುವುದನ್ನು ತಪ್ಪಿಸುವ ಉದ್ದೇಶದಿಂದ ಪಶ್ಚಿಮ ಬಂಗಾಳ ಸರ್ಕಾರವು ಅಂದಾಜು 1.10 ಲಕ್ಷ ಜನರನ್ನು ಕರಾವಳಿ ಪ್ರದೇಶಗಳಿಂದ ಸುರಕ್ಷಿತ ಸ್ಥಳಗಳಿಗೆ ರವಾನಿಸಿದೆ.
ಸುಂದರಬನ ಹಾಗೂ ಸಾಗರ ದ್ವೀಪದಿಂದಲೂ ಜನರನ್ನು ಸ್ಥಳಾಂತರ ಮಾಡಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ರಕ್ಷಣೆ ಹಾಗೂ ಪರಿಹಾರ ಕಾರ್ಯಕ್ಕೆ ನೆರವಾಗಲು ರಾಜ್ಯದ ಪರಿಹಾರ ನಿರ್ವಹಣಾ ತಂಡ ಮತ್ತು ಎನ್‌ಡಿಆರ್‌ಎಫ್‌ನ ತಲಾ 16 ತುಕಡಿಗಳನ್ನು ನಿಯೋಜಿಸಲಾಗಿದೆ.
ಪರಿಸ್ಥಿತಿಯನ್ನು ಅವಲೋಕಿಸಲು ರಾಜ್ಯದ ಸಚಿವಾಲಯದಲ್ಲಿ ಕೇಂದ್ರೀಕೃತ ನಿಯಂತ್ರಣ ಘಟಕವೊಂದನ್ನು ಆರಂಭಿಸಲಾಗಿದೆ.