ನವದೆಹಲಿ: ರಫ್ತು ಮಾಡುವ ಮಸಾಲೆ ಪದಾರ್ಥಗಳಲ್ಲಿ ಇಟಿಒ (ಎಥಿಲೀನ್ ಆಕ್ಸೈಡ್ - ಕಾರ್ಸಿನೋಜೆನಿಕ್ ರಾಸಾಯನಿಕ) ಮಾಲಿನ್ಯ ತಡೆಗಟ್ಟಲು ಭಾರತ ವಿವರವಾದ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ. ಸಿಂಗಾಪುರ ಮತ್ತು ಹಾಂಗ್ ಕಾಂಗ್‌ಗೆ ರಫ್ತು ಮಾಡುವ ಮಸಾಲೆ ಪದಾರ್ಥಗಳ ಕಡ್ಡಾಯ ಪರೀಕ್ಷೆಯಂತಹ ಇತರ ಕ್ರಮಗಳನ್ನು ಸರ್ಕಾರ ಜಾರಿಗೆ ತಂದಿದೆ ಎಂದು ಅವರು ಹೇಳಿದ್ದಾರೆ.
ಕೆಲವು ಮಸಾಲೆ ಪದಾರ್ಥಗಳಲ್ಲಿ EtO ಅಂಶದಿಂದಾಗಿ ಸಿಂಗಾಪುರ ಮತ್ತು ಹಾಂಗ್ ಕಾಂಗ್‌ನಲ್ಲಿ ಭಾರತದ ಎರಡು ಮಸಾಲೆ ಬ್ರಾಂಡ್ ಗಳಾದ MDH ಮತ್ತು ಎವರೆಸ್ಟ್ ಉತ್ಪನ್ನಗಳ ವಾಪಸ್ ಪಡೆಯುತ್ತಿರುವ ವರದಿಗಳ ಬೆನ್ನಲ್ಲೆ ಸರ್ಕಾರ ಈ ಮಹತ್ವದ ಕ್ರಮ ಕೈಗೊಂಡಿದೆ. ಸಿಂಗಾಪುರ ಮತ್ತು ಹಾಂಗ್ ಕಾಂಗ್ ಗೆ ಮಸಾಲೆ ಪದಾರ್ಥ ರಫ್ತು ಮಾಡುವ ಮುನ್ನ ಕಡ್ಡಾಯವಾಗಿ EtO ಪರೀಕ್ಷೆ ಪ್ರಾರಂಭಿಸಲಾಗಿದೆ. ಪೂರೈಕೆಯ ಎಲ್ಲಾ ಹಂತ (ಸೋರ್ಸಿಂಗ್, ಪ್ಯಾಕೇಜಿಂಗ್, ಸಾರಿಗೆ, ಪರೀಕ್ಷೆ) ಒಳಗೊಂಡಂತೆ ಸಂಭವನೀಯ EtO ಮಾಲಿನ್ಯ ತಡೆಗೆ ಸೂಕ್ತ ರೀತಿಯಲ್ಲಿ ಕ್ರಮ ಕೈಗೊಳ್ಳುವಂತೆ ಎಲ್ಲಾ ರಫ್ತುದಾರಿಗೆ ಮಾರ್ಗಸೂಚಿಗಳನ್ನು ನೀಡಲಾಗಿದೆ.
ಮಸಾಲೆ ಮಂಡಳಿ ನೀಡಿದ ಸೂಕ್ತ ಕ್ರಮಗಳ ಆಧಾರದ ಮೇಲೆ ರಫ್ತುದಾರರಿಂದ ಆಗಾಗ್ಗೆ ಸ್ಯಾಂಪಲ್ ಪರೀಕ್ಷೆಗೂ ಸೂಚಿಸಲಾಗಿದೆ ಎಂದು ಅಧಿಕಾರಿ ತಿಳಿಸಿದರು. ಸಮಸ್ಯೆಯನ್ನು ವಿವರಿಸಿದ ಇನ್ನೊಬ್ಬ ಅಧಿಕಾರಿ, ಆಹಾರ ಉತ್ಪನ್ನಗಳಲ್ಲಿ, ಸ್ಯಾಂಪಲ್ ಗಳ ಒಂದು ನಿರ್ದಿಷ್ಟ ಪ್ರಮಾಣದ ವೈಫಲ್ಯವಿದೆ ಮತ್ತು ಭಾರತದ ಸ್ಯಾಂಪಲ್ ವೈಫಲ್ಯವು ಶೇಕಡಾ 1 ಕ್ಕಿಂತ ಕಡಿಮೆಯಾಗಿದೆ ಎಂದು ಹೇಳಿದರು.
EtO ಕಾರಣದಿಂದಾಗಿ ಯುರೋಪಿಯನ್ ಒಕ್ಕೂಟಕ್ಕೆ ಭಾರತೀಯ ಆಹಾರ ಸರಕುಗಳ ರಫ್ತಿನ ಎಚ್ಚರಿಕೆಗಳಲ್ಲಿ ತೀವ್ರ ಕುಸಿತ ಕಂಡುಬಂದಿದೆ. ಎಥಿಲೀನ್ ಆಕ್ಸೈಡ್‌ಗೆ ಅಂತರಾಷ್ಟ್ರೀಯ ಮಾನದಂಡವಿಲ್ಲ. ಎಥಿಲೀನ್ ಆಕ್ಸೈಡ್, ಅದರ ಬಾಷ್ಪಶೀಲ ಸ್ವಭಾವದಿಂದಾಗಿ, ಯಾವುದೇ ಕುರುಹುಗಳನ್ನು ಬಿಡುವುದಿಲ್ಲ ಮತ್ತು ಗಾಳಿಯಾಡದಿದ್ದಲ್ಲಿ, ಶೀಘ್ರದಲ್ಲೇ ಉತ್ಪನ್ನಗಳಲ್ಲಿ ಕ್ಲೋರೊ ಎಥಿಲೀನ್ (CE) ಆಗಿ ಬದಲಾಗುತ್ತದೆ.