ನವದೆಹಲಿ: 'ಮತದಾನದ ಬಳಿಕ ಇವಿಎಂನಲ್ಲಿ ಸಂಗ್ರಹವಾದ ದತ್ತಾಂಶವನ್ನು ಕನಿಷ್ಠ ಎರಡು-ಮೂರು ವರ್ಷಗಳವರೆಗೆ ಸುರಕ್ಷಿತವಾಗಿ ಇರಿಸಿಕೊಳ್ಳಬೇಕು. ಜೊತೆಗೆ, ಈ ಬಾರಿಯ ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗುವ ಮೊದಲೇ ಈ ಬಾರಿ ಸಂಗ್ರಹವಾದ ದತ್ತಾಂಶವನ್ನು ಸಾರ್ವಜನಿಕಗೊಳಿಸಬೇಕು ಎಂದು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿ' ಎಂದು ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್ ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಸುಪ್ರೀಂ ಕೋರ್ಟ್ ಅನ್ನು ಒತ್ತಾಯಿಸಿದ್ದಾರೆ.
'ಫಾರಂ 17ಸಿ ಅನ್ನು ಸಾರ್ವಜನಿಕಗೊಳಿಸಿ ಎಂದು ಆಗ್ರಹಿಸಿದರೆ, ಆಯೋಗವು ಅದನ್ನು ನಿರಾಕರಿಸಿದೆ. ಆ ಮೂಲಕ ಎಷ್ಟು ಮತದಾನವಾಗಿದೆ ಎಂಬ ಮಾಹಿತಿಯನ್ನು ಜನರಿಗೆ ನೀಡಲು ಅದು ಒಪ್ಪಿಲ್ಲ. ಮತ ಎಣಿಕೆ ಮುಗಿದು, ಫಲಿತಾಂಶ ಬಂದ ಮೇಲೆ ಏನೂ ಮಾಡುವುದಕ್ಕೆ ಬರುವುದಿಲ್ಲ. ಸರ್ಕಾರ ರಚನೆಯಾಗುತ್ತದೆ. ಹಾಗಾಗಿ, ಯಾವ ಅಭ್ಯರ್ಥಿಯೂ 'ಅಕ್ರಮ'ವಾಗಿ ಆಯ್ಕೆ ಆಗಬಾರದು' ಎಂದರು.
'ಚುನಾವಣಾ ಆಯೋಗಕ್ಕೆ ಫಾರಂ 17ಸಿ ಅನ್ನು ಬಿಡುಗಡೆ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ ಎಂದಾದರೆ, ರಾಜ್ಯ ಚುನಾವಣಾ ಅಧಿಕಾರಿಯು ಆ ಕೆಲಸ ಮಾಡಬಹುದು' ಎಂದು ಹೇಳಿದರು.
'ಪರಿಷ್ಕೃತ ಮತದಾನ ಪ್ರಮಾಣದ ಮಾಹಿತಿಯನ್ನು ಆಯೋಗ ಬಿಡುಗಡೆ ಮಾಡಿದಾಗ, ಮತದಾನ ಪ್ರಮಾಣವು ಎಷ್ಟು ಏರಿಕೆಯಾಗಿದೆ, ಯಾವ ರೀತಿಯಲ್ಲಿ ಏರಿಕೆಯಾಗಿದೆ ಎಂಬೆಲ್ಲಾ ಮಾಹಿತಿಯನ್ನು ನಾವು ತಿಳಿದುಕೊಳ್ಳಬೇಕು. ಜನರಿಗೆ ಮಾಹಿತಿ ನೀಡಲು ಆಯೋಗವು ಹಿಂಜರಿಕೆ ತೋರಬಾರದು. ಇಂಥ ಮಾಹಿತಿಯನ್ನು ಚುನಾವಣಾ ಆಯೋಗವು 30 ದಿನಗಳವರೆಗೆ ಮಾತ್ರ ಸುರಕ್ಷಿತವಾಗಿರಿಸುತ್ತದೆ' ಎಂದರು.
'ಮತದಾನ ಪ್ರಮಾಣ ತಿಳಿಯಬೇಕು'
'ಎಲ್ಲ ಯಂತ್ರಗಳಿಗೆ ಇರುವಂತೆ ಇವಿಎಂಗೂ ಕಾರ್ಯನಿರ್ವಹಣಾ ವ್ಯವಸ್ಥೆ ಇದೆ. ಎಷ್ಟು ಹೊತ್ತಿಗೆ ಮತದಾನ ಮುಗಿಯಿತು ಎಷ್ಟು ಮತಗಳು 'ಅಮಾನ್ಯ'ಗೊಂಡಿವೆ ಮತ್ತು ಎಷ್ಟು ಹೊತ್ತಿಗೆ ಮತ ಹಾಕಲಾಗಿದೆ ಎಂಬೆಲ್ಲಾ ಮಾಹಿತಿಯನ್ನು ಈ ವ್ಯವಸ್ಥೆ ನೀಡುತ್ತದೆ. ಆದ್ದರಿಂದ ಈ ಸಾಕ್ಷ್ಯವನ್ನು ಸುರಕ್ಷಿತವಾಗಿ ಇರಿಸಲೇಬೇಕು' ಎಂದು ಸಂಸದ ಕಪಿಲ್ ಸಿಬಲ್ ಒತ್ತಾಯಿಸಿದರು.