ನವದೆಹಲಿ: ಭಾರತದ ಪ್ರಮುಖ ಸಂಶೋಧನಾ ಸಂಸ್ಥೆ ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರ್ ರಿಸರ್ಚ್ (ಐಸಿಎಆರ್) ಕಳೆನಾಶಕ-ಸಹಿಷ್ಣು (Ht) ಆರೊಮ್ಯಾಟಿಕ್ ಅಕ್ಕಿ (ಬಾಸ್ಮತಿ) ಅಕ್ಕಿಯನ್ನು ವಾಣಿಜ್ಯಿಕವಾಗಿ ಬಿಡುಗಡೆ ಮಾಡಿದೆ.
ಐಸಿಎಆರ್ ಬಿಡುಗಡೆ ಮಾಡಿರುವ ಎರಡು ಪ್ರತ್ಯೇಕ ತಳಿಗಳ ಭತ್ತವನ್ನು ಕಡಮೆ ಪ್ರಮಾಣದ ನೀರಿನಲ್ಲಿ ಬೆಳೆಯಬಹುದಾಗಿದ್ದು, ಗ್ರೀನ್ ಹೌಸ್ ಅನಿಲಗಳಾದ ಮೀಥೇನ್ ನ್ನು ಕಡಿಮೆ ಮಾಡಿ ಅಕ್ಕಿಯ ಇಳುವರಿ ಹೆಚ್ಚಾಗಲಿದೆ.
ಆದರೆ ಐಸಿಎಆರ್ ಈ ಅಕ್ಕಿ ತಳಿಗಳ ಬಗ್ಗೆ ಬಿಡುಗಡೆ ಮಾಡಿರುವ ಹೇಳಿಕೆಗಳನ್ನು ವಿಜ್ಞಾನಿಗಳು ಪ್ರಶ್ನಿಸಲು ಆರಂಭಿಸಿದ್ದಾರೆ. ಐಸಿಎಆರ್ ಹೇಳಿಕೆಗಳು ವಿಪರೀತ ಉತ್ಪ್ರೇಕ್ಷೆಯಿಂದ ಕೂಡಿದ್ದು, ಭತ್ತದ ವೈವಿಧ್ಯತೆಯನ್ನೇ ನಾಶ ಮಾಡಲಿದೆ ಎಂದು ಹೇಳಿದ್ದಾರೆ.
ಹೊಸ ಎರಡು ವಿಧದ ಬಾಸ್ಮತಿ ಅಕ್ಕಿ ಪುಸ ಬಾಸ್ಮತಿ 1979 ಹಾಗೂ ಪುಸ ಬಾಸ್ಮತಿ 1985 ತಳೀಯವಾಗಿ ಮಾರ್ಪಡಿಸದ (non-genetically modified) ಅಕ್ಕಿಯ ಪ್ರಭೇದಗಳಾಗಿದ್ದು, ಮೂರು ವರ್ಷಗಳ ಕಾಲ ಪ್ರಯೋಗ ನಡೆಸಿ ಅಭಿವೃದ್ಧಿಪಡಿಸಲಾಗಿದೆ. ಇದು ಈಗಿರುವ ಪುಸ ಬಾಸ್ಮತಿ 1121 ಹಾಗೂ ಪುಸ ಬಾಸ್ಮತಿ 1509 ಅಕ್ಕಿಯ ಸುಧಾರಿತ ಆವೃತ್ತಿಗಳಾಗಿವೆ.