ಭಾರತೀಯರು ಆರೋಗ್ಯವನ್ನು ಕಾಪಾಡಿಕೊಳ್ಳಲು ಆಹಾರ ಪದ್ಥತಿ ಹೇಗಿರಬೇಕು ಎಂಬುದರ ಕುರಿತ ಮಾರ್ಗಸೂಚಿಯನ್ನು ದೆಹಲಿಯ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಸಂಸ್ಥೆ ಬಿಡುಗಡೆ ಮಾಡಿದೆ.
ಮಾಂಸಖಂಡಗಳನ್ನು ಹುರಿಗೊಳಿಸಲು ಪ್ರೋಟೀನ್ ಪೂರಕ ಆಹಾರಗಳಿಂದ ದೂರವಿರಿ, ಉಪ್ಪು, ಸಕ್ಕರೆ, ಸಂಸ್ಕರಿಸಿದ ಆಹಾರಗಳ ಸೇವನೆ ಹಿತಮಿತವಾಗಿರಲಿ.
ಅಪೆಕ್ಸ್ ಹೆಲ್ತ್ ರಿಸರ್ಚ್ ಬಾಡಿ ಅಡಿಯಲ್ಲಿ ಹೈದರಾಬಾದ್ ಮೂಲದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್ (ಎನ್‌ಐಎನ್) ಸಂಸ್ಥೆಯು ದೇಹಕ್ಕೆ ಅಗತ್ಯ ಪೋಷಕಾಂಶಗಳನ್ನು ಪೂರೈಸಲು ಮತ್ತು ಸಾಂಕ್ರಾಮಿಕವಲ್ಲದ ರೋಗಗಳನ್ನು (ಎನ್‌ಸಿಡಿ) ತಡೆಗಟ್ಟಲು ಏನೆಲ್ಲಾ ಕ್ರಮಗಳನ್ನು ಅನುಸರಿಸಬಹುದು ಎಂದು ಭಾರತೀಯರಿಗೆ ಆಹಾರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ತಜ್ಞ ವೈದ್ಯೆ ಡಾ| ಹೇಮಲತಾ ಆರ್. ಅವರ ನೇತೃತ್ವದಲ್ಲಿ ಈ ಮಾರ್ಗಸೂಚಿ ರಚಿಸಲಾಗಿದ್ದು, 17 ಸಲಹೆಗಳನ್ನು ಇದರಲ್ಲಿ ನಮೂದಿಸಲಾಗಿದೆ.
ದೀರ್ಘಕಾಲ ಹೆಚ್ಚಿನ ಪ್ರಮಾಣದ ಪ್ರೋಟೀನ್ ಪೌಡರ್ ಅಥವಾ ಹೈ ಪ್ರೋಟೀನ್‌ಯುಕ್ತ ಆಹಾರ ಸೇವಿಸುವುದರಿಂದ ಮೂಳೆಗಳ ಸಾಮರ್ಥ್ಯಕ್ಕೆ ಹಾನಿಯಾಗಬಹುದು ಅಲ್ಲದೆ ಮೂತ್ರಪಿಂಡಕ್ಕೆ ಅಪಾಯತಂದೊಡ್ಡಬಹುದು. ಹೀಗಾಗಿ ಅವುಗಳಿಂದ ದೂರವಿರಿ.
ದೇಹದ ಒಟ್ಟು ಶಕ್ತಿಯ ಶೇ 5ರಷ್ಟು ಮಾತ್ರ ಸಕ್ಕರೆ ಸೇವನೆ ಇರಬೇಕು, ಸಮತೋಲಿತ ಆಹಾರದಲ್ಲಿ ಧಾನ್ಯಗಳು ಮತ್ತು ರಾಗಿಯ ಸೇವನೆ ಶೇ 45 ಕ್ಕಿಂತ ಹೆಚ್ಚು ಕ್ಯಾಲೊರಿಗಳಿರಬಾರದು, ದ್ವಿದಳ ಧಾನ್ಯಗಳು, ಬೀನ್ಸ್ ಮತ್ತು ಮಾಂಸದಿಂದ ಶೇ15 ರಷ್ಟು ಕ್ಯಾಲೊರಿಗಳನ್ನು ದೇಹಕ್ಕೆ ಒದಗಿಸಬೇಕು, ಉಳಿದ ಕ್ಯಾಲೋರಿಗಳು, ಬೀಜಗಳು, ತರಕಾರಿ, ಹಣ್ಣು ಮತ್ತು ಹಾಲು ಸೇವನೆಯಿಂದ ದೊರೆಯುತ್ತದೆ, ಕೊಬ್ಬಿನ ಪ್ರಮಾಣ ಶೇ 30 ರಷ್ಟು ಅಥವಾ ಕಡಿಮೆ ಇದ್ದರೆ ಒಳ್ಳೆಯದು ಎಂದಿದೆ.
ದ್ವಿದಳ ಧಾನ್ಯಗಳ ಸೀಮಿತ ಲಭ್ಯತೆ ಮತ್ತು ಮಾಂಸಕ್ಕೆ ಬೆಲೆ ಹೆಚ್ಚಿರುವ ಕಾರಣ ಬಹುತೇಕ ಭಾರತೀಯರು ಸಿರಿಧಾನ್ಯಗಳ ಮೇಲೆ ಹೆಚ್ಚು ಅವಲಂಬಿತವಾಗಿದ್ದಾರೆ. ಇದರ ಪರಿಣಾಮವಾಗಿ ಅಗತ್ಯವಾದ ಮ್ಯಾಕ್ರೋನ್ಯೂಟ್ರಿಯಂಟ್‌ಗಳು (ಅಗತ್ಯ ಅಮಿನೊ ಆಮ್ಲಗಳು ಮತ್ತು ಅಗತ್ಯ ಕೊಬ್ಬಿನಾಮ್ಲಗಳು) ಮತ್ತು ಸೂಕ್ಷ್ಮ ಪೋಷಕಾಂಶಗಳ ಕೊರತೆ ಭಾರತೀಯರಲ್ಲಿ ಕಂಡುಬರುತ್ತಿದೆ ಎಂದೂ ಐಸಿಎಂಆರ್ ಹೇಳಿದೆ.
ಅಗತ್ಯ ಪ್ರಮಾಣದ ಪೋಷಕಾಂಶಗಳನ್ನು ಸೇವಿಸದಿದ್ದರೆ, ಚಯಾಪಚಯ ಕ್ರಿಯೆಗೆ ತೊಡಕಾಗಲಿದೆ. ಅಲ್ಲದೆ ಚಿಕ್ಕ ವಯಸ್ಸಿನಲ್ಲೇ ಇನ್ಸುಲಿನ್ ಪ್ರಮಾಣ ದೇಹದಲ್ಲಿ ಹೆಚ್ಚಾಗಿ ಅಪಾಯ ಎದುರಾಗುತ್ತದೆ. ದೇಶದಲ್ಲಿ 56.4 ಪ್ರತಿಷತದಷ್ಟು ಕಾಯಿಲೆಗಳು ಹೆಚ್ಚುತ್ತಿರುವುದಕ್ಕೆ ಅನಾರೋಗ್ಯಕರ ಆರೋಗ್ಯ ಪದ್ಧತಿಯೇ ಕಾರಣವಾಗಿದೆ. ಆರೋಗ್ಯಕರ ಆಹಾರಾಭ್ಯಾಸ ಮತ್ತು ದೈಹಿಕ ಚಟುವಟಿಕೆ ಹೃದ್ರೋಗ, ಅಧಿಕ ರಕ್ತದೊತ್ತಡ ಮತ್ತು ಶೇ 80ರಷ್ಟು ಮಧುಮೇಹ ಕಾಯಿಲೆಯನ್ನು ತಡೆಗಟ್ಟಲಿದೆ ಎಂದು ಮಾರ್ಗಸೂಚಿಯಲ್ಲಿ ನಮೂದಿಸಿದೆ.
ಆರೋಗ್ಯಕರ ಆಹಾರ ಸೇವನೆಯ ಅಭ್ಯಾಸದಿಂದ ಸಣ್ಣ ವಯಸ್ಸಿನಲ್ಲೇ ಸಂಭವಿಸುವ ಸಾವನ್ನು ತಡೆಗಟ್ಟಬಹುದು. ಅಲ್ಲದೆ ಹೆಚ್ಚು ಸಂಸ್ಕರಿಸಿದ ಆಹಾರ, ಸಕ್ಕರೆ ಮತ್ತು ಕೊಬ್ಬಿನ ಆಹಾರ ಸೇವನೆಯನ್ನು ತಪ್ಪಿಸಿದರೆ ಬೊಜ್ಜಿನ ಸಮಸ್ಯೆಯಿಂದ ದೂರವಿರಬಹುದು ಎಂದು ಸಲಹೆ ನೀಡಿದೆ.