ನವದೆಹಲಿ: ನಿಕೋಬಾರ್ ದ್ವೀಪಗಳು ಮತ್ತು ದಕ್ಷಿಣ ಅಂಡಮಾನ್ ಸಮುದ್ರದ ಮೇಲೆ ನೈಋತ್ಯ ಮಾನ್ಸೂನ್ ಪ್ರವೇಶಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಇಂದಿನಿಂದ ಮೇ 23 ರವರೆಗೆ ದಕ್ಷಿಣ ಪೆನಿನ್ಸುಲರ್ ಭಾರತದಲ್ಲಿ ಭಾರೀ ಮತ್ತು ಅತಿ ಭಾರೀ ಮಳೆಯು ಮುಂದುವರಿಯುವ ಸಾಧ್ಯತೆಯಿದೆ ಎಂದು IMD ಮುನ್ಸೂಚನೆ ನೀಡಿದೆ. ನೈರುತ್ಯ ಮುಂಗಾರು ಜೂನ್ ನಲ್ಲಿ ಆರಂಭವಾಗಿ ಸೆಪ್ಟೆಂಬರ್ ವರೆಗೆ ಇರುತ್ತದೆ ಎಂದು ತಿಳಿಸಿದೆ.
IMD ಪ್ರಕಾರ, ನೈಋತ್ಯ ಮಾನ್ಸೂನ್ ಮಾಲ್ಡೀವ್ಸ್ ಮತ್ತು ಕೊಮೊರಿನ್ ಪ್ರದೇಶದ ಕೆಲವು ಭಾಗಗಳಿಗೆ ಮತ್ತು ದಕ್ಷಿಣ ಬಂಗಾಳ ಕೊಲ್ಲಿ, ನಿಕೋಬಾರ್ ದ್ವೀಪಗಳು ಮತ್ತು ದಕ್ಷಿಣ ಅಂಡಮಾನ್ ಸಮುದ್ರದ ಕೆಲವು ಭಾಗಗಳಿಗೆ ಮುಂದುವರೆದಿದೆ.
ಕಳೆದ ತಿಂಗಳು, IMD ಭಾರತದಲ್ಲಿ ಮಾನ್ಸೂನ್ ಋತುವಿನಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆ ಮುನ್ಸೂಚನೆ ನೀಡಿತ್ತು, ಈ ವರ್ಷ ಕಂಡುಬಂದ ಲಾ ನಿನಾ ಪರಿಸ್ಥಿತಿಯಿಂದಾಗಿ ಅಧಿಕ ಬಿಸಿಲಿನ ಪರಿಸ್ಥಿತಿಯನ್ನು ಎದುರಿಸಿದ್ದು ಮಳೆಯು ಕೂಡ ಚೆನ್ನಾಗಿ ಸುರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ದೇಶದ ಅನೇಕ ಕಡೆಗಳಲ್ಲಿ, ಗರಿಷ್ಠ ತಾಪಮಾನವು 48 ಡಿಗ್ರಿ ಸೆಲ್ಸಿಯಸ್ ಗೆ ತಲುಪಿದೆ, ಜನರ ಆರೋಗ್ಯ ಮತ್ತು ಜೀವನೋಪಾಯದ ಮೇಲೆ ತೀವ್ರ ಪರಿಣಾಮ ಬೀರಿದೆ. ದಕ್ಷಿಣ ಭಾರತವು ಏಪ್ರಿಲ್‌ನಲ್ಲಿ ಶಾಖದ ಅಲೆಗಳನ್ನು ಅನುಭವಿಸಿತು.
ಕೃಷಿ ಪ್ರಧಾನ ದೇಶ ಭಾರತ ಮುಂಗಾರು ಮಳೆಯನ್ನು ನಂಬಿಕೊಂಡಿದೆ. ನಿವ್ವಳ ಕೃಷಿ ಪ್ರದೇಶದ ಶೇಕಡಾ 52 ಭಾಗವು ಮಳೆಯನ್ನವಲಂಬಿಸಿದೆ. ಜೂನ್ ಮತ್ತು ಜುಲೈ ತಿಂಗಳನ್ನು ಕೃಷಿಗೆ ಪ್ರಮುಖ ಮಾನ್ಸೂನ್ ತಿಂಗಳುಗಳೆಂದು ಪರಿಗಣಿಸಲಾಗುತ್ತದೆ, ಖಾರಿಫ್ ಬೆಳೆಗೆ ಹೆಚ್ಚಿನ ಬಿತ್ತನೆ ಈ ಅವಧಿಯಲ್ಲಿ ನಡೆಯುತ್ತದೆ.