ನವದೆಹಲಿ: 'ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ರೋಹಿತ್ ವೇಮುಲರಂತೆ ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ಜಾತಿ ಮತ್ತು ಜನಾಂಗೀಯ ದೌರ್ಜನ್ಯಗಳ ನಿಯಂತ್ರಣಕ್ಕೆ 'ರೋಹಿತ್ ವೇಮುಲ' ಕಾಯ್ದೆಯನ್ನು ಜಾರಿಗೆ ತರಲಿದೆ' ಎಂದು ಕಾಂಗ್ರೆಸ್ ತಿಳಿಸಿದೆ.
'ರೋಹಿತ್ ವೇಮುಲ ಪ್ರಕರಣದ ಕುರಿತು ಈ ಹಿಂದೆ ನಡೆದ ತನಿಖೆಯಲ್ಲಿ ಬಹಳ ವ್ಯತ್ಯಾಸಗಳಾಗಿವೆ. ವೇಮುಲ ಕುಟುಂಬಕ್ಕೆ ನ್ಯಾಯ ಒದಗಿಸಲು ತೆಲಂಗಾಣದ ರೇವಂತ್ ರೆಡ್ಡಿ ಸರ್ಕಾರ ಬದ್ಧವಾಗಿದೆ' ಎಂದು ಕಾಂಗ್ರೆಸ್ ಪ್ರಧಾನ ಕಾರ್ಯರ್ಶಿ (ಸಂಘಟನೆ) ಕೆ.ಸಿ ವೇಣುಗೋಪಾಲ್ ತಿಳಿಸಿದರು.
'ಅಂತಿಮ ವರದಿಯು 2023ರ ಜೂನ್‌ನಲ್ಲಿಯೇ ಸಿದ್ಧವಾಗಿತ್ತು ಎಂದು ತೆಲಂಗಾಣ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ದೌರ್ಜನ್ಯದಿಂದಾಗಿ ರೋಹಿತ್ ವೇಮುಲ ಸಾವಾಗಿದ್ದು, ಇದು ಬಿಜೆಪಿಯ ದಲಿತ ವಿರೋಧಿ ಮನಃಸ್ಥಿತಿಯನ್ನು ತೋರಿಸುತ್ತದೆ. ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ಪಕ್ಷವು ವೇಮುಲ ಕುಟುಂಬದ ಜೊತೆ ನಿಲ್ಲಲಿದೆ' ಎಂದರು.
ಇತ್ತೀಚೆಗೆ ರೋಹಿತ್ ವೇಮುಲ ಆತ್ಮಹತ್ಯೆ ಪ್ರಕರಣದ ವರದಿಯನ್ನು ಸಲ್ಲಿಸಿದ್ದ ತೆಲಂಗಾಣ ಪೊಲೀಸರು, 'ರೋಹಿತ್ ದಲಿತನಾಗಿರಲಿಲ್ಲ ಮತ್ತು ತನ್ನ ನಿಜ ಗುರುತು ಬಯಲಾಗುವುದೆಂದು ಆತ ಆತ್ಮಹತ್ಯೆಗೆ ನಿರ್ಧರಿಸಿದ್ದ' ಎಂದು ತಿಳಿಸಿದ್ದರು.
ವೇಮುಲ ತಾಯಿ ರಾಧಿಕಾ ವೇಮುಲ ಅವರು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರನ್ನು ಶನಿವಾರ ಭೇಟಿಯಾಗಿ ತನ್ನ ಮಗನ ಸಾವಿಗೆ ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದರು. ಪ್ರಕರಣದ ಬಗ್ಗೆ ಮರುತನಿಖೆ ನಡೆಸುವುದಾಗಿ ರೇವಂತ್ ಭರವಸೆ ನೀಡಿದ್ದಾರೆ.