ನವದೆಹಲಿ: ಲೋ ಕಸಭಾ ಚುನಾವಣೆಯ 5ನೇ ಹಂತದ ಮತದಾನ ಮುಕ್ತಾಯವಾಗಿದ್ದು, ಸಂಜೆ 5 ಗಂಟೆ ವೇಳೆಗೆ ಶೇ.57.47ರಷ್ಟು ಮತದಾನವಾಗಿದೆ ಎಂದು ಕೇಂದ್ರ ಚುನವಣಾ ಆಯೋಗ ಮಾಹಿತಿ ನೀಡಿದೆ.
ಸೋಮವಾರ ನಡೆದ ಮತದಾನ ಪ್ರಕ್ರಿಯೆ ಬಹುತೇಕ ಕಡೆ ಶಾಂತಿಯುತವಾಗಿ ಮತದಾನ ನಡೆದಿದ್ದು, ಪಶ್ಚಿಮ ಬಂಗಾಳದ ಕೆಲವೆಡೆ ಮಾತ್ರ ಗಲಾಟೆ ನಡೆದಿವೆ ಎಂದು ತಿಳಿದುಬಂದಿದೆ. ಸಂಜೆ 5 ಗಂಟೆ ಸುಮಾರಿಗೆ ಆರು ರಾಜ್ಯಗಳು ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳ 49 ಕ್ಷೇತ್ರಗಳಲ್ಲಿ ಶೇ.57.47ರಷ್ಟು ಮತದಾನವಾಗಿದೆ. ಈ ಹಿಂದಿನ ಹಂತಗಳಿಗೆ ಹೋಲಿಕೆ ಮಾಡಿದರೆ 5ನೇ ಹಂತದಲ್ಲಿ ಮತದಾನ ಪ್ರಮಾಣ ಕಡಿಮೆಯಾದಂತಿದೆ.
ಪಶ್ಚಿಮ ಬಂಗಾಳದಲ್ಲಿ ಗರಿಷ್ಠ, ಮಹಾರಾಷ್ಟ್ರದಲ್ಲಿ ಕನಿಷ್ಠ ಮತದಾನ
ಪಶ್ಚಿಮ ಬಂಗಾಳದಲ್ಲಿ ಐದನೇ ಹಂತದಲ್ಲಿ ಹೆಚ್ಚಿನ ಮತದಾನ ದಾಖಲಾಗಿದೆ. ರಾಜ್ಯದಲ್ಲಿ ಕೆಲವೆಡೆ ಹಿಂಸಾಚಾರ ಪ್ರಕರಣಗಳು ಸುದ್ದಿಯಾಗಿದ್ದರೂ ಶೇ.73ರಷ್ಟು ಮತದಾನ ದಾಖಲಾಗಿದೆ. ಇನ್ನು ಲಡಾಕ್‌ನಲ್ಲಿ ಶೇ.67.15, ಜಾರ್ಖಂಡ್‌ನಲ್ಲಿ ಶೇ.63ರಷ್ಟು ಮತದಾನ ನಡೆದಿದೆ. ಇನ್ನು ಮಹಾರಾಷ್ಟ್ರದಲ್ಲಿ ಕೇವಲ ಶೇ.48.88ರಷ್ಟು ಮತದಾನ ದಾಖಲಾಗಿದ್ದು, ಐದನೇ ಹಂತದಲ್ಲಿ ಕನಿಷ್ಠ ಮತದಾನ ನಡೆದ ರಾಜ್ಯ ಎನಿಸಿದೆ. ನಾಲ್ಕನೇ ಹಂತದಲ್ಲೂ ಮಹಾರಾಷ್ಟ್ರದಲ್ಲೂ ಕನಿಷ್ಠ ಮತದಾನ ದಾಖಲಾಗಿತ್ತು.
ಉತ್ತರ ಪ್ರದೇಶದಲ್ಲಿ ಶೇ.57.79% ಮತದಾನವಾಗಿದ್ದು, ಒಡಿಶಾದಲ್ಲಿ 60.72% ಮತದಾನ, ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ 54.49% ಮತ್ತು ಬಿಹಾರದಲ್ಲಿ 52.60% ರಷ್ಟು ಮತದಾನ ದಾಖಲಾಗಿದೆ.