ನವದೆಹಲಿ: ಮೂರನೇ ಹಂತದಲ್ಲಿ 11 ರಾಜ್ಯಗಳಲ್ಲಿ, ಲೋಕಸಭೆಯ 93 ಕ್ಷೇತ್ರಗಳಿಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ಶೇ 65ರಷ್ಟು ಮತದಾನವಾಗಿದೆ. ಈ ಮೂಲಕ ಲೋಕಸಭೆಯ ಶೇ 50ರಷ್ಟು ಅಂದರೆ 283 ಕ್ಷೇತ್ರಗಳಲ್ಲಿ ಮತದಾನ ಪೂರ್ಣಗೊಂಡಂತಾಗಿದೆ.
ಕೇಂದ್ರ ಸಚಿವ ಗೃಹ ಸಚಿವ ಅಮಿತ್ ಶಾ, ಎನ್‌ಸಿಪಿ ನಾಯಕಿ ಸುಪ್ರಿಯಾ ಸುಳೆ, ಜ್ಯೋತಿರಾದಿತ್ಯ ಸಿಂಧಿಯಾ ಸೇರಿ ಒಟ್ಟು 1,331 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಮತಯಂತ್ರಗಳಲ್ಲಿ ದಾಖಲಾಯಿತು.
ಪಶ್ಚಿಮ ಬಂಗಾಳದಲ್ಲಿ ಅಲ್ಪಪ್ರಮಾಣದ ಹಿಂಸಾಚಾರ ಘಟನೆಗಳು ನಡೆದಿದರೆ, ರಸ್ತೆ ಅಭಿವೃದ್ಧಿಪಡಿಸದ ಧೋರಣೆಯನ್ನು ಪ್ರತಿಭಟಿಸಿ ಉತ್ತರ ಪ್ರದೇಶದ ಮೂರು ಗ್ರಾಮಗಳಲ್ಲಿ ಮತದಾರರು ಚುನಾವಣೆಯನ್ನು ಬಹಿಷ್ಕರಿಸಿದರು.
ಮೂರನೇ ಹಂತದ ಮತದಾನದ ವೇಳೆ, ದೇಶದಲ್ಲಿನ ಚುನಾವಣಾ ವ್ಯವಸ್ಥೆಯನ್ನು ವೀಕ್ಷಿಸಲು 23 ವಿವಿಧ ರಾಷ್ಟ್ರಗಳ 75 ಪ್ರಮುಖರು ಆರು ರಾಜ್ಯಗಳಲ್ಲಿ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿದ್ದರು. ಮತಯಂತ್ರ ಹಂಚಿಕೆ, ಸಿಬ್ಬಂದಿ ನಿಯೋಜನೆ ಪ್ರಕ್ರಿಯೆಯನ್ನು ವೀಕ್ಷಿಸಿದರು.
ಕೇಂದ್ರ ಚುನಾವಣಾ ಆಯೋಗದ ಪ್ರಾಥಮಿಕ ಮಾಹಿತಿ ಪ್ರಕಾರ ರಾತ್ರಿ 8.30ರ ವೇಳೆಗೆ ಶೇ 61.73ರಷ್ಟು ಮತದಾನವಾಗಿದೆ. 2019ರ ಚುನಾವಣೆಯಲ್ಲಿ ಎರಡನೇ ಹಂತದಲ್ಲಿ ಶೇ 68.4ರಷ್ಟು ಮತದಾನವಾಗಿತ್ತು.
ಮೋದಿ ಮತದಾನ: ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ನ ಗಾಂಧಿನಗರದ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು.
ಬಳಿಕ 'ಎಕ್ಸ್' ಜಾಲತಾಣದಲ್ಲಿ ಈ ಕುರಿತಂತೆ ಪೋಸ್ಟ್ ಮಾಡಿದ್ದು, 'ಜನರು ದಾಖಲೆ ಸಂಖ್ಯೆಯಲ್ಲಿ ಬಂದು ಮತ ಹಕ್ಕು ಚಲಾಯಿಸಬೇಕು. ಸಕ್ರಿಯ ಪಾಲುದಾರಿಕೆಯು ಚುನಾವಣೆಯನ್ನು ಇನ್ನಷ್ಟು ಆಕರ್ಷಕಗೊಳಿಸಲಿದೆ' ಎಂದು ಮನವಿ ಮಾಡಿದರು.
ಹಿಂಸಾಚಾರ: ಪಶ್ಚಿಮ ಬಂಗಾಳದ ಮುರ್ಶಿರಾಬಾದ್, ಜಾಂಗಿಪುರ ಕ್ಷೇತ್ರದಲ್ಲಿ ಹಿಂಸಾಚಾರ ಘಟನೆಗಳು ನಡೆದಿವೆ. ನಮ್ಮ ಮತದಾರರು ಮತಗಟ್ಟೆಗೆ ಬಾರದಂತೆ ಬಿಜೆಪಿ ಕಾರ್ಯಕರ್ತರು, ಪೊಲೀಸರು ತಡೆದಿದ್ದಾರೆ ಸಮಾಜವಾದಿ ಪಕ್ಷದ ಅಭ್ಯರ್ಥಿಗಳು ದೂರಿದರು.
ಉತ್ತರ ಪ್ರದೇಶದ ಧೋರನ್‌ಪುರ್‌ನಲ್ಲಿ ರಸ್ತೆ ನಿರ್ಮಿಸದ ಜನಪ್ರತಿನಿಧಿಗಳ ಧೋರಣೆ ಖಂಡಿಸಿ ಫಿರೋಜಾಬಾದ್ ಜಿಲ್ಲೆಯ ನಾಗ್ಲಾ ಜವಾಹರ್, ನೀಮ್ ಖೇರಿಯಾ, ನಾಗ್ಲಾ ಉಮರ್ ಗ್ರಾಮಗಳಲ್ಲಿ ಜನರು ಮತದಾನ ಬಹಿಷ್ಕರಿಸಿದರು.
ಮಹಾರಾಷ್ಟ್ರದಲ್ಲಿ ಪವಾರ್ ಕುಟುಂಬದ ಪ್ರತಿಷ್ಠೆಯ ಕಣವಾಗಿದ್ದ ಬಾರಾಮತಿ ಕ್ಷೇತ್ರದಲ್ಲಿ ಕನಿಷ್ಠ ಅಂದರೆ ಶೇ 47.84ರಷ್ಟು ಮತದಾನವಾಗಿದೆ. ಇಲ್ಲಿ ಸಂಸದೆ ಸುಪ್ರಿಯಾ ಸುಳೆ ವಿರುದ್ಧ, ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಸ್ಪರ್ಧಿಸಿದ್ದಾರೆ.