ಇಂದೋರ್: ಬಿಜೆಪಿಯ ಕೆಲವು ಮುಖಂಡರು ತಮ್ಮನ್ನು ಸಂಪರ್ಕಿಸಿ, ಲೋಕಸಭಾ ಕಣದಿಂದ ಹಿಂದೆ ಸರಿಯುವಂತೆ ಮನವಿ ಮಾಡಿದರು ಎಂದು ಇಂದೋರ್ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಹಾಗೂ ಆರ್‌ಎಸ್‌ಎಸ್‌ನ ಮಾಜಿ 'ಪ್ರಚಾರಕ್' ಅಭಯ್ ಜೈನ್ ಸೋಮವಾರ ಹೇಳಿದ್ದಾರೆ. ಆರೋಪವನ್ನು ಅಲ್ಲಗಳೆದಿರುವ ಬಿಜೆಪಿ, ಇದು 'ಕಾಲ್ಪನಿಕ' ಮತ್ತು 'ಪ್ರಚಾರ ತಂತ್ರ' ಎಂದು ಪ್ರತಿಕ್ರಿಯಿಸಿದೆ.
ಅಭಯ್ ಜೈನ್ 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಕೈಲಾಶ್ ವಿಜಯವರ್ಗೀಯ ವಿರುದ್ಧ ಸ್ಪರ್ಧಿಸಿ ಠೇವಣಿ ಕಳೆದುಕೊಂಡಿದ್ದರು. ನಂತರ ಆರ್‌ಎಸ್‌ಎಸ್‌ನ ಮಾಜಿ 'ಪ್ರಚಾರ ಪ್ರಮುಖ್'ಗಳು ಸೇರಿ 'ಜನಹಿತ ಪಕ್ಷ' ಸ್ಥಾಪಿಸಿದ್ದರು. ಆದರೆ, ಅದಕ್ಕೆ ಚುನಾವಣಾ ಆಯೋಗ ಇನ್ನೂ ಮಾನ್ಯತೆ ನೀಡಿಲ್ಲ. ಹೀಗಾಗಿ ಜೈನ್ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ.
ಬಿಜೆಪಿಯ ಕೈಲಾಶ್ ವಿಜಯವರ್ಗೀಯ ಸೇರಿದಂತೆ ಹಲವರು ತಮ್ಮನ್ನು ಭೇಟಿ ಮಾಡಿ, ಕಣದಿಂದ ಹಿಂದೆ ಸರಿಯುವಂತೆ ಕೇಳಿಕೊಂಡರು ಎಂದು ಜೈನ್ ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ಗೋವಿಂದ್ ಮಾಲು, 'ಕಣದಿಂದ ಹಿಂದೆ ಸರಿಯುವಂತೆ ಮನವಿ ಮಾಡಲು, ಅವರು ನಮಗೆ ಸವಾಲೆನಿಸುವ ಅಭ್ಯರ್ಥಿಯೇ ಅಲ್ಲ' ಎಂದು ಹೇಳಿದ್ದಾರೆ.