ಕೊಚ್ಚಿನ್: ವಯನಾಡು ಜೊತೆ ಜೊತೆಗೇ ರಾಹುಲ್ ಗಾಂಧಿ ರಾಯ್ ಬರೇಲಿಯಿಂದಲೂ ಸ್ಪರ್ಧೆ ಮಾಡುವ ಮೂಲಕ ಇಲ್ಲಿನ ಮತದಾರರಿಗೆ ಅನ್ಯಾಯ ಮಾಡಿದ್ದು, ಇದು ರಾಜಕೀಯ ಅನೈತಿಕತೆ ಎಂದು ಸಿಪಿಐ ಕಿಡಿಕಾರಿದೆ.
ವಯನಾಡಿನಲ್ಲಿ ರಾಹುಲ್ ಗಾಂಧಿ ಪ್ರತಿಸ್ಪರ್ಧಿಯಾಗಿರುವ ಸಿಪಿಐ ಅಭ್ಯರ್ಥಿ ಆ್ಯನ್ನಿ ರಾಜಾ, ಕಾಂಗ್ರೆಸ್ ಯುವನಾಯಕನ ವಿರುದ್ಧ ಕಿಡಿಕಾರಿದರು. 'ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಉತ್ತರ ಪ್ರದೇಶದ ರಾಯ್ಬರೇಲಿಯಿಂದ ನಾಮಪತ್ರ ಸಲ್ಲಿಸುವ ಮೂಲಕ ವಯನಾಡು ಮತದಾರರಿಗೆ ಅನ್ಯಾಯವೆಸಗಿದ್ದು, ಅವರು ಮೊದಲೇ ತಮ್ಮ ಉದ್ದೇಶವನ್ನು ಮತದಾರರಿಗೆ ತಿಳಿಸದೇ ಮೋಸ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ರಾಯ್ ಬರೇಲಿಯಿಂದಲೂ ಸ್ಪರ್ಧಿಸುವ ರಾಹುಲ್ ಗಾಂಧಿ ನಡೆ ವಯನಾಡಿನ "ಮತದಾರರಿಗೆ ಅನ್ಯಾಯ". ಇದು ಅವರ ರಾಜಕೀಯ ನೈತಿಕತೆಯ ಬಗ್ಗೆ ಪ್ರಶ್ನೆ ಏಳುವಂತೆ ಮಾಡುತ್ತದೆ. ವಯನಾಡ್ ಮತದಾರರಿಗೆ ತನ್ನ ಉದ್ದೇಶವನ್ನು ತಿಳಿಸದೆ, ರಾಹುಲ್ ಗಾಂಧಿ ಅವರಿಗೆ "ಅನ್ಯಾಯ" ಮಾಡುತ್ತಿದ್ದಾರೆ. ಸಂಸದೀಯ ಪ್ರಜಾಪ್ರಭುತ್ವದಲ್ಲಿ ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಿಂದ ಸ್ಪರ್ಧಿಸಬಹುದು.
ಆ ಪ್ರಜಾಪ್ರಭುತ್ವದ ಹಕ್ಕನ್ನು ರಾಹುಲ್ ಗಾಂಧಿ ಬಳಸಿಕೊಳ್ಳುತ್ತಿದ್ದಾರೆ. ಅವರು ರಾಯಬರೇಲಿಯಿಂದ ನಾಮಪತ್ರ ಸಲ್ಲಿಸಿದ್ದಾರೆ. ಆದರೆ ಇದು ವಯನಾಡಿನ ಮತದಾರರಿಗೆ ಮಾಡಿದ ಅನ್ಯಾಯವಾಗಿದೆ. ಏಕೆಂದರೆ ಅವರು ಒಮ್ಮೆಯೂ ಈ ಬಗ್ಗೆ ಮತದಾರರ ಬಳಿ ಪ್ರಸ್ತಾಪಿಸಲಿಲ್ಲ ಎಂದು ಸಿಪಿಐ ಅಭ್ಯರ್ಥಿ ಆ್ಯನ್ನಿ ರಾಜಾ ಹೇಳಿದರು.
"ನೀವು ಮತದಾರರಿಗೆ ಸತ್ಯವನ್ನು ಹೇಳುವುದು ಮುಖ್ಯ ಮತ್ತು ನಂತರ ಯಾರಿಗೆ ಮತ ಹಾಕಬೇಕೆಂದು ಅವರು ನಿರ್ಧರಿಸುತ್ತಾರೆ. ಇದು ರಾಜಕೀಯ ನೈತಿಕತೆಗೆ ಸಂಬಂಧಿಸಿದ್ದಾಗಿದೆ ಎಂದು ಆ್ಯನ್ನಿ ರಾಜಾ ಹೇಳಿದರು.