ಅಹಮದಾಬಾದ್: ರಾಜ್‌ಕೋಟ್ ಗೇಮ್ ಝೋನ್ ಅಗ್ನಿ ಅವಘಡದಲ್ಲಿ ಮೃತರಾದ ಸಂತ್ರಸ್ತರ ಕುಟುಂಬಗಳಿಗೆ ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ ತಲಾ 2 ಲಕ್ಷ ರೂಪಾಯಿ ಪರಿಹಾರವನ್ನು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ ಎಂದು ಅವರ ಕಚೇರಿ ಭಾನುವಾರ ತಿಳಿಸಿದೆ.
ಗಾಯಾಳುಗಳಿಗೆ 50,000 ರೂಪಾಯಿ ನೀಡಲಾಗುವುದು ಎಂದು ಪ್ರಧಾನಿ ಕಾರ್ಯಾಲಯವು ಎಕ್ಸ್‌ನಲ್ಲಿ ತಿಳಿಸಿದೆ.
ಗುಜರಾತ್ ಸರ್ಕಾರವು ಮೃತರ ಕುಟುಂಬಕ್ಕೆ 4 ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ 50,000 ರೂಪಾಯಿಗಳನ್ನು ಘೋಷಿಸಿದೆ.
ಶನಿವಾರ ಸಂಜೆ ಗುಜರಾತ್‌ನ ರಾಜ್‌ಕೋಟ್ ನಗರದ ನಾನಾ-ಮಾವಾ ಪ್ರದೇಶದ ಗೇಮ್ ಝೋನ್‌ನಲ್ಲಿ ಸಂಭವಿಸಿದ ಭಾರಿ ಅಗ್ನಿ ಅನಾಹುತದಲ್ಲಿ ನಾಲ್ಕು ಮಕ್ಕಳು ಸೇರಿದಂತೆ 27 ಜನರು ಸಾವಿಗೀಡಾಗಿದ್ದಾರೆ ಮತ್ತು ಮೂವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಮತ್ತು ಪ್ರಧಾನಿ ಮೋದಿ ಘಟನೆಯ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದಾರೆ.
ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಭಾನುವಾರ ಬೆಳಗ್ಗೆ ರಾಜ್‌ಕೋಟ್‌ಗೆ ಭೇಟಿ ನೀಡಿ, ಅಗ್ನಿ ದುರಂತದ ಸ್ಥಳವನ್ನು ಪರಿಶೀಲಿಸಿದರು ಮತ್ತು ಸಂತ್ರಸ್ತರ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು ಎಂದು ಮುಖ್ಯಮಂತ್ರಿಗಳ ಕಚೇರಿ (ಸಿಎಂಒ) ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ಪಟೇಲ್ ನಂತರ ರಾಜ್‌ಕೋಟ್‌ನ ಹಿರಾಸರ್ ವಿಮಾನ ನಿಲ್ದಾಣದಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯ, ಗಾಯಾಳುಗಳ ಚಿಕಿತ್ಸೆ ಮತ್ತು ಸ್ಥಳೀಯ ಆಡಳಿತ ಕೈಗೊಂಡ ಇತರ ಕ್ರಮಗಳ ಕುರಿತು ಉನ್ನತ ಮಟ್ಟದ ಪರಿಶೀಲನಾ ಸಭೆ ನಡೆಸಿದರು.