ಮುಂಬೈ: 2024ನೇ ಸಾಲಿನ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರಕ್ಕೆ ದಾಖಲೆಯ 2.11 ಲಕ್ಷ ಕೋಟಿ ರೂ.ಗಳ ಹೆಚ್ಚುವರಿ ವರ್ಗಾವಣೆ/ಲಾಭಾಂಶ ಪಾವತಿ ಮಾಡಲು ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಬುಧವಾರ ನಿರ್ಧರಿಸಿದೆ.
ಬುಧವಾರ ಆರ್ ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರೀಯ ನಿರ್ದೇಶಕರ ಮಂಡಳಿಯ 608ನೇ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. 2023-24ನೇ ಸಾಲಿಗೆ ಕೇಂದ್ರ ಸರ್ಕಾರಕ್ಕೆ ಹೆಚ್ಚುವರಿಯಾಗಿ 2,10,874 ಕೋಟಿ ರೂಪಾಯಿ ವರ್ಗಾಯಿಸಲು ಮಂಡಳಿಯು ಅನುಮೋದನೆ ನೀಡಿದೆ ಎಂದು ಆರ್‌ಬಿಐ ಪ್ರಕಟಣೆಯಲ್ಲಿ ತಿಳಿಸಿದೆ.
ಕಳೆದ 2023 ಆರ್ಥಿಕ ವರ್ಷದಲ್ಲಿ, RBI ಕೇಂದ್ರ ಸರ್ಕಾರಕ್ಕೆ 87,416 ಕೋಟಿ ರೂಪಾಯಿ ಲಾಭಾಂಶವನ್ನು ಪಾವತಿಸಿತ್ತು. ಹಿಂದಿನ ವರ್ಷಕ್ಕೆ ಈ ಬಾರಿ ಎರಡು ಪಟ್ಟು ಹೆಚ್ಚು ಅಂದರೆ 2.11 ಲಕ್ಷ ಕೋಟಿ ರೂ. ಡಿವಿಡೆಂಡ್ ನೀಡುತ್ತಿದೆ. ಆರ್‌ಬಿಐ ಈವರೆಗೆ ನೀಡಲಾಗಿರುವ ಗರಿಷ್ಠ ಲಾಭಾಂಶ ಇದಾಗಲಿದೆ.
2019 ರ ಆಗಸ್ಟ್ 26 ರಂದು ಮಾಜಿ ಆರ್‌ಬಿಐ ಗವರ್ನರ್ ಬಿಮಲ್ ಜಲನ್ ನೇತೃತ್ವದ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ರಿಸರ್ವ್ ಬ್ಯಾಂಕ್ ಅಳವಡಿಸಿಕೊಂಡ ಆರ್ಥಿಕ ಬಂಡವಾಳ ಚೌಕಟ್ಟಿನ(ECF) ಆಧಾರದ ಮೇಲೆ ಆರ್‌ಬಿಐ ಈ ದಾಖಲೆ ಮೊತ್ತದ ಡಿವಿಡೆಂಡ್ ಹಣವನ್ನು ಸರ್ಕಾರಕ್ಕೆ ಒದಗಿಸಲು ನಿರ್ಧರಿಸಿದೆ. ಅಧಿಕಾರ ಫಾರೆಕ್ಸ್ ಮೀಸಲು ನಿಧಿ ಸೇರಿದಂತೆ ವಿವಿಧ ಅಂಶಗಳು ಆರ್ಬಿಐನ ಹೆಚ್ಚುವರಿ ಡಿವಿಡೆಂಡ್ ವರ್ಗಾವಣೆಗೆ ಕಾರಣವಾಗಿವೆ ಎನ್ನಲಾಗಿದೆ.
2.11 ಟ್ರಿಲಿಯನ್ ರೂಪಾಯಿಗಳ ಲಾಭಾಂಶ ವರ್ಗಾವಣೆಯು 2025ನೇ ಸಾಲಿನ ಮಧ್ಯಂತರ ಬಜೆಟ್‌ನ 1.5 ಟ್ರಿಲಿಯನ್ ರೂಪಾಯಿಗಿಂತ ಹೆಚ್ಚು ಲಾಭಾಂಶವಾಗಿದೆ. ಬಜೆಟ್‌ಗಿಂತ ಹೆಚ್ಚಿನ ಲಾಭಾಂಶ ವರ್ಗಾವಣೆಯು ಸರ್ಕಾರದ ಸಂಪನ್ಮೂಲ ಲಕೋಟೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಇಕ್ರಾ ರೇಟಿಂಗ್ಸ್‌ನ ಮುಖ್ಯ ಅರ್ಥಶಾಸ್ತ್ರಜ್ಞೆ ಅದಿತಿ ನಾಯರ್ ಅವರು ಹೇಳಿದ್ದಾರೆ.
ಸಿಆರ್ಬಿ ಹೆಚ್ಚಳ: 2022-23 ನೇ ಹಣಕಾಸು ವರ್ಷದಲ್ಲಿ ಉತ್ತಮ ಆರ್ಥಿಕ ಬೆಳವಣಿಗೆ ಸಾಧಿಸಿದ್ದು, ಕಾಂಟಿನೆಂಟ್ ರಿಸ್ಕ್ ಬಫರ್ (ಸಿಆರ್ಬಿ) ಅನ್ನು ಶೇಕಡಾ 6 ಕ್ಕೆ ಹೆಚ್ಚಿಸಲಾಗಿತ್ತು. ಈ ವರ್ಷವೂ ಆರ್ಥಿಕತೆಯು ದೃಢ ಮತ್ತು ಸ್ಥಿರವಾಗಿ ಉಳಿದಿರುವುದರಿಂದ 2023-24 ನೇ ಸಾಲಿಗೆ ಸಿಆರ್ಬಿಯನ್ನು ಶೇಕಡಾ 6.50 ಕ್ಕೆ ಹೆಚ್ಚಿಸಲು ಮಂಡಳಿಯು ನಿರ್ಧರಿಸಿದೆ ಎಂದು ಆರ್‌ಬಿಐ ತಿಳಿಸಿದೆ.