ಬೇಸಿಗೆಯಲ್ಲಿ ತಾಪಮಾನ ಹೆಚ್ಚುವ ಕಾರಣದಿಂದ ದೇಹವು ಅತಿಯಾಗಿ ಬೆವರುತ್ತದೆ. ಬೆವರಿನಿಂದ ಬಿಸಿಲಗಾಲ ಇನ್ನಷ್ಟು ಹಿಂಸೆ ಅನ್ನಿಸುತ್ತದೆ. ಬೆವರುವುದರಿಂದ ಮೇಕಪ್ ಕೂಡ ಅಳಿಸಿ ಹೋಗುತ್ತದೆ. ಕೆಲವರಿಗೆ ಬೆವರು ದುರ್ಗಂಧ ಬರುತ್ತದೆ. ಈ ಎಲ್ಲಾ ಕಾರಣಗಳಿಂದ ಹಲವರು ಬೆವರು ಬಾರದಂತೆ ತಪ್ಪಿಸಿಕೊಳ್ಳುತ್ತಾರೆ.
ಬೆವರುವುದು ದೇಹ ತಂಪಾಗಿಸುವ ಪ್ರಕ್ರಿಯೆಯ ಪ್ರಮುಖ ಭಾಗವಾಗಿದೆ. ಚರ್ಮದ ಮೇಲೆ ಬೆವರು ಗ್ರಂಥಿಗಳ ಮೂಲಕ ಬೆವರು ಸ್ರವಿಸುತ್ತದೆ. ಇದರಿಂದ ದೇಹದ ಒಳಗಿನ ಉಷ್ಣತೆ ಕಡಿಮೆಯಾಗುತ್ತದೆ. ಉಷ್ಣಾಂಶ ಹೆಚ್ಚಿರುವ ಪ್ರದೇಶಗಳಲ್ಲಿ ವಾಸಿಸುವ ಜನರು ಹೆಚ್ಚು ಬೆವರುತ್ತಾರೆ. ಬೆವರುವ ಕಾರಣದಿಂದ ದೇಹದಿಂದ ನೀರಿನಾಂಶಗಳು ಹೊರ ಹೋಗುತ್ತದೆ. ಆ ಕಾರಣದಿಂದ ಸಾಕಷ್ಟು ನೀರು ಕುಡಿಯಬೇಕು. ಬೇಸಿಗೆಯ ದಿನಗಳಲ್ಲಿ ಬೆವರಿನ ಕಾರಣ ದೇಹಕ್ಕೆ ಕಿರಿಕಿರಿ ಆಗುತ್ತದೆ ಎಂದು ಕೊಳ್ಳುವ ಮುನ್ನ ಬೆವರುವುದರಿಂದ ದೇಹಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ತಿಳಿದುಕೊಳ್ಳಿ.
ಬೆವರು ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ
ವ್ಯಾಯಾಮವು ದೇಹದಾದ್ಯಂತ ರಕ್ತ ಪರಿಚಲನೆ ಸುಧಾರಿಸುತ್ತದೆ. ಇದು ಒಳಗಿನಿಂದ ಚರ್ಮಕ್ಕೆ ಆರೋಗ್ಯಕರ ಹೊಳಪನ್ನು ನೀಡುತ್ತದೆ. ವ್ಯಾಯಾಮದ ಸಮಯದಲ್ಲಿ ವಿಪರೀತ ಬೆವರುವುದರಿಂದ ಚರ್ಮದ ಹೊಳೆಪು ಹೆಚ್ಚುತ್ತದೆ. ಆರೋಗ್ಯಕರ ರಕ್ತದ ಹರಿವು ಚರ್ಮದ ಜೀವಕೋಶಗಳಿಗೆ ಆಮ್ಲಜನಕ ಮತ್ತು ಪೋಷಕಾಂಶಗಳನ್ನು ತಲುಪಿಸಲು ಸಹಾಯ ಮಾಡುತ್ತದೆ. ರಕ್ತದ ಹರಿವು ಆರೋಗ್ಯಕರವಾಗಿರಲು ವ್ಯಾಯಾಮ ಮಾಡಬೇಕು. ವ್ಯಾಯಾಮದ ಸಮಯದಲ್ಲಿ ಬೆವರುವುದು ಸಹಜ. ಹಾಗಾಗಿ ಬೆವರು ಬಿಡಬೇಕು.
ಹೃದಯದ ಆರೋಗ್ಯವನ್ನು ಕಾಪಾಡುತ್ತದೆ
ಕೆಲಸ ಮಾಡುವಾಗ ಬೆವರುವುದರಿಂದ ನಿಮ್ಮ ಹೃದಯ ಚೆನ್ನಾಗಿ ಕೆಲಸ ಮಾಡುತ್ತಿದೆ ಎಂದರ್ಥ. ಹೆಚ್ಚು ಬೆವರುವವರು ಹೆಚ್ಚು ಕೆಲಸ ಮಾಡುತ್ತಿದ್ದಾರೆ ಎಂದರ್ಥ. ಬೆವರುವುದು ನಿಮ್ಮ ದೇಹವನ್ನು ಶುದ್ಧೀಕರಿಸುವ ಅತ್ಯಂತ ಪರಿಣಾಮಕಾರಿ ವಿಧಾನಗಳಲ್ಲಿ ಒಂದಾಗಿದೆ. ಬೆವರುವುದು ದೇಹದಿಂದ ಹೆಚ್ಚುವರಿ ಉಪ್ಪು ಮತ್ತು ಕೊಲೆಸ್ಟ್ರಾಲ್ ಅನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಬೆವರು ರಂಧ್ರಗಳ ಮೂಲಕ ತ್ಯಾಜ್ಯಗಳು ಮತ್ತು ವಿಷಾಂಶಗಳು ಹೊರಬರುತ್ತವೆ. ಆದ್ದರಿಂದ ಮೊಡವೆಗಳು ಮತ್ತು ಇತರ ಚರ್ಮದ ಸಮಸ್ಯೆಗಳು ನಿವಾರಣೆಯಾಗುತ್ತವೆ.
ಮೂತ್ರಪಿಂಡದ ಕಲ್ಲುಗಳು ರೂಪುಗೊಳ್ಳುವುದಿಲ್ಲ
ಹೆಚ್ಚು ಬೆವರುವವರಲ್ಲಿ ಮೂತ್ರಪಿಂಡದ ಕಲ್ಲುಗಳು ಬೆಳೆಯುವ ಸಾಧ್ಯತೆ ಕಡಿಮೆ. ಬೆವರುವುದರಿಂದ ದೇಹದಿಂದ ಹೆಚ್ಚುವರಿ ಉಪ್ಪಿನಾಂಶ ಹೊರ ಹೋಗುತ್ತದೆ. ಮೂತ್ರಪಿಂಡದ ಕಲ್ಲುಗಳ ರಚನೆಗೆ ಕಾರಣವೆಂದರೆ ಮೂತ್ರದಲ್ಲಿ ಉಪ್ಪು ಮತ್ತು ಕ್ಯಾಲ್ಸಿಯಂ ಶೇಖರಣೆ. ಬೆವರು ಉಪ್ಪನ್ನು ಹೊರಹಾಕಿದಾಗ, ಮೂತ್ರಪಿಂಡದ ಕಲ್ಲುಗಳ ಸಾಧ್ಯತೆಯೂ ಕಡಿಮೆಯಾಗುತ್ತದೆ. ಇದು ಬೆವರುವುದರಿಂದ ಸಿಗುವ ಅತಿ ಮುಖ್ಯ ಪ್ರಯೋಜನ.
ಬ್ಯಾಕ್ಟೀರಿಯಾದಿಂದ ದೇಹವನ್ನು ರಕ್ಷಿಸುತ್ತದೆ
ಬೆವರುವುದರಿಂದ ಹಾನಿಕಾರಕ ಸೋಂಕುಗಳು ಮತ್ತು ಸೂಕ್ಷ್ಮಜೀವಿಗಳು ದೇಹವನ್ನು ಪ್ರವೇಶಿಸುವುದನ್ನು ತಡೆಯುತ್ತದೆ. ಬೆವರು ಆಂಟಿಮೈಕ್ರೊಬಿಯಲ್, ಬ್ಯಾಕ್ಟೀರಿಯಾ ವಿರೋಧಿ, ಆಂಟಿವೈರಲ್ ಮತ್ತು ಆಂಟಿಫಂಗಲ್ ಗುಣಲಕ್ಷಣಗಳನ್ನು ಹೊಂದಿದೆ. ಇವು ಬ್ಯಾಕ್ಟೀರಿಯಾವನ್ನು ದೇಹದಿಂದ ಹೊರಗಿಡುತ್ತವೆ. ಆದ್ದರಿಂದ ಬೆವರುವಿಕೆಯ ಬಗ್ಗೆ ಚಿಂತಿಸಬೇಡಿ. ದಿನದಲ್ಲಿ ಸ್ವಲ್ಪ ಸಮಯ ಬೆವರುವುದು ದೇಹಕ್ಕೆ ಎಲ್ಲ ರೀತಿಯಿಂದಲೂ ಒಳ್ಳೆಯದು.
ಬೆವರುವುದರಿಂದ ದೇಹಕ್ಕೆ ಇಷ್ಟೆಲ್ಲಾ ಪ್ರಯೋಜನಗಳಿವೆ. ಮೇಕಪ್ ಹಾಳಾಗುತ್ತದೆ, ಕಿರಿಕಿರಿ ಎನ್ನಿಸುತ್ತದೆ ಎನ್ನುವ ಕಾರಣಕ್ಕೆ ಬೆವರದೇ ಇರುವುದು ಸರಿಯಲ್ಲ. ಸದಾ ಏಸಿ ಕೋಣೆಯಲ್ಲಿ ಕುಳಿತು ಇರುವುದರಿಂದ ದೇಹದಲ್ಲಿ ಇಲ್ಲದ ಸಮಸ್ಯೆ ಕಾಣಿಸಬಹುದು. ಹಾಗಾಗಿ ಬೆವರುವ ಕೆಲಸಗಳನ್ನು ಮಾಡಿ.