ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತದ ಕುರಿತು ಪಾಕಿಸ್ತಾನ ರಾಯಭಾರಿ ನೀಡಿದ 'ವಿನಾಶಕಾರಿ ಮತ್ತು ಅಪಾಯಕಾರಿ' ಹೇಳಿಕೆಗೆ ತೀಕ್ಷ್ಣವಾದ ಪ್ರತ್ಯುತ್ತರ ನೀಡಿದ ಭಾರತ, 'ಪಾಕಿಸ್ತಾನವು ಎಲ್ಲ ವಿಷಯಗಳಲ್ಲೂ ಅಪ್ರಾಮಾಣಿಕವಾಗಿ ನಡೆದುಕೊಂಡಿರುವ ಇತಿಹಾಸ ಹೊಂದಿದೆ' ಎಂದು ಚಾಟಿ ಬೀಸಿದೆ.
ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತದ ಕುರಿತು ಪಾಕಿಸ್ತಾನ ರಾಯಭಾರಿ ನೀಡಿದ 'ವಿನಾಶಕಾರಿ ಮತ್ತು ಅಪಾಯಕಾರಿ' ಹೇಳಿಕೆಗೆ ತೀಕ್ಷ್ಣವಾದ ಪ್ರತ್ಯುತ್ತರ ನೀಡಿದ ಭಾರತ, 'ಪಾಕಿಸ್ತಾನವು ಎಲ್ಲ ವಿಷಯಗಳಲ್ಲೂ ಅಪ್ರಾಮಾಣಿಕವಾಗಿ ನಡೆದುಕೊಂಡಿರುವ ಇತಿಹಾಸ ಹೊಂದಿದೆ' ಎಂದು ಚಾಟಿ ಬೀಸಿದೆ.
ಸಾಮಾನ್ಯ ಸಭೆಯ 'ಶಾಂತಿ ಸಂಸ್ಕೃತಿ' ಕುರಿತ ಚರ್ಚೆಯಲ್ಲಿ ಭಾಷಣ ಮಾಡಿದ ಪಾಕಿಸ್ತಾನದ ರಾಯಭಾರಿ ಮುನೀರ್ ಅಕ್ರಂ, ಕಾಶ್ಮೀರ ವಿಷಯ, ಪೌರತ್ವ (ತಿದ್ದುಪಡಿ) ಕಾಯ್ದೆ ಮತ್ತು ಅಯೋಧ್ಯೆಯಲ್ಲಿನ ರಾಮ ಮಂದಿರ ಉಲ್ಲೇಖಿಸಿ ಟೀಕಿಸಿದರು.
ಮುನೀರ್ ಅಕ್ರಂ ಅವರ ಟೀಕೆಯ ಹೇಳಿಕೆಗೆ ವಿಶ್ವಸಂಸ್ಥೆಯಲ್ಲಿ ಭಾರತದ ರಾಯಭಾರಿ, ಕಾಯಂ ಪ್ರತಿನಿಧಿಯಾಗಿರುವ ರುಚಿರಾ ಕಾಂಬೋಜ್ ಅವರು ಅಷ್ಟೇ ತೀಕ್ಷ್ಣವಾದ ಪ್ರತಿಕ್ರಿಯೆಯನ್ನು ನೀಡಿದ್ದಾರೆ.
'ಈ ಸಭೆಯಲ್ಲಿನ ಒಂದು ಅಂತಿಮ ಅಂಶವೆಂದರೆ, ಈ ಸವಾಲಿನ ಸಮಯದಲ್ಲಿ ನಾವು ಶಾಂತಿಯ ಸಂಸ್ಕೃತಿಯನ್ನು ಬೆಳೆಸಲು ಪ್ರಯತ್ನಿಸುತ್ತಿರುವಾಗ, ನಮ್ಮ ಗಮನವು ರಚನಾತ್ಮಕ ಮಾತುಕತೆ ಮೇಲೆ ಕೇಂದ್ರಿತವಾಗಿರುತ್ತದೆ. ಹೀಗಾಗಿ ನಾವು ನಿರ್ದಿಷ್ಟ ನಿಯೋಗದ (ಪಾಕಿಸ್ತಾನ) ಟೀಕೆಗಳನ್ನು ಬದಿಗಿರಿಸುತ್ತೇವೆ. ಇವು ಶೋಭೆ ಇಲ್ಲದ ಮಾತ್ರವಲ್ಲದೆ, ನಮ್ಮ ಸಾಮೂಹಿಕ ಪ್ರಯತ್ನಗಳಿಗೆ ಅಡ್ಡಿಮಾಡುವಂತಹ ವಿಧ್ವಂಸಕ ಮತ್ತು ವಿನಾಶಕಾರಿ ನಡವಳಿಕೆಯ ಹೇಳಿಕೆಗಳು' ಎಂದು ಕಾಂಬೋಜ್ ಗುರುವಾರ ಕಿಡಿಕಾರಿದರು.
ದೇಶಗಳು ಪರಸ್ಪರ ಗೌರವಿಸಬೇಕು ಮತ್ತು ರಾಜತಾಂತ್ರಿಕ ಮಾರ್ಗ ಅನುಸರಿಸಬೇಕೆಂಬ ತತ್ವವನ್ನು ಅನುಸರಿಸಲು ಭಾರತ ಬಲವಾಗಿ ಪ್ರತಿಪಾದಿಸುತ್ತದೆ. ಇವೇ ನಮ್ಮ ಚರ್ಚೆಯ ಮಾರ್ಗದರ್ಶಿ ಸೂತ್ರಗಳು ಕೂಡ ಆಗಿರಬೇಕು. ಆದರೆ, ಎಲ್ಲಾ ವಿಚಾರದಲ್ಲೂ ಅತ್ಯಂತ ಅಪ್ರಾಮಾಣಿಕವಾಗಿ ನಡೆದುಕೊಂಡಿರುವ ಇತಿಹಾಸವುಳ್ಳ ದೇಶವೊಂದರಿಂದ ಇಂಥದ್ದನ್ನು ನಿರೀಕ್ಷಿಸಲು ಸಾಧ್ಯವೇ ಎಂದು ಕಾಂಬೋಜ್ ಚಾಟಿ ಬೀಸಿದರು.
ಭಯೋತ್ಪಾದನೆಯು ಶಾಂತಿಯ ಸಂಸ್ಕೃತಿ ಮತ್ತು ಎಲ್ಲಾ ಧರ್ಮಗಳ ಮೂಲ ಬೋಧನೆಗಳಿಗೆ ನೇರ ವಿರೋಧಿ ಎಂದ ಕಾಂಬೋಜ್, ಶಾಂತಿಯ ಸಂಸ್ಕೃತಿ ಎನ್ನುವುದು ಸಹಾನುಭೂತಿ, ಪರಸ್ಪರ ತಿಳಿವಳಿಕೆ ಮತ್ತು ಸಹಬಾಳ್ವೆಯನ್ನು ಪ್ರತಿಪಾದಿಸುತ್ತದೆ ಎಂದು ಒತ್ತಿಹೇಳಿದರು.
ಭಾರತವು ಹೆಮ್ಮೆಯಿಂದ ಪ್ರಾಯೋಜಿಸಿದ 'ಶಾಂತಿಯ ಸಂಸ್ಕೃತಿಯ ಘೋಷಣೆ ಮತ್ತು ಕಾರ್ಯಕ್ರಮದ ಅನುಸರಣೆ' ಎಂಬ ನಿರ್ಣಯವನ್ನು ಸಾಮಾನ್ಯ ಸಭೆಯಲ್ಲಿ ಮಂಡಿಸಿದ್ದಕ್ಕಾಗಿ ಬಾಂಗ್ಲಾದೇಶವನ್ನು ಭಾರತ ಶ್ಲಾಘಿಸಿದೆ.