ಹೈದರಾಬಾದ್: ಮುಸ್ಲಿಂ ಮಹಿಳೆಯರ ಮುಖ ತೋರಿಸುವಂತೆ ಒತ್ತಾಯಿಸಿ, ಬಳಿಕ, ಮತದಾರರ ಗುರುತಿನ ಚೀಟಿಯನ್ನು ಅವರಿಗೆ ಹೋಲಿಕೆ ಮಾಡುವ ಮೂಲಕ ಹೈದರಾಬಾದ್‌ನ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ.
ಈ ಕುರಿತಂತೆ ಚುನಾವಣಾಧಿಕಾರಿಯೂ ಆಗಿರುವ ಹೈದರಾಬಾದ್ ಜಿಲ್ಲಾಧಿಕಶರಿ ಎಕ್ಸ್‌ನಲ್ಲಿ ಮಾಹಿತಿ ನೀಡಿದ್ದು, 'ಬಿಜೆಪಿ ಅಭ್ಯರ್ಥಿ ಶ್ರೀಮತಿ ಮಾಧವಿ ಲತಾ ವಿರುದ್ಧ ಮಾಲಕ್‌ಪೇಟ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 171ಸಿ, 186, 505(1)(ಸಿ) ಮತ್ತು ಪ್ರಜಾ ಪ್ರತಿನಿಧಿ ಕಾಯ್ದೆಯ ಸೆಕ್ಷನ್ 132ರ ಅನ್ವಯ ಅನ್ವಯ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದ್ದಾರೆ.
ಮತಗಟ್ಟೆ ಒಳಗಡೆ ಮುಸ್ಲಿಂ ಮಹಿಳೆಯರನ್ನು ಬುರ್ಖಾ ಸರಿಸುವಂತೆ ಒತ್ತಾಯಿಸುವ ಮಾಧವಿ ಲತಾ. ಬಳಿಕ, ವೋಟರ್ ಐಡಿ ಹಿಡಿದು ಚೆಕ್ ಮಾಡುತ್ತಿರುವ ದೃಶ್ಯವನ್ನು ವಿಡಿಯೊದಲ್ಲಿ ಕಾಣಬಹುದಾಗಿದೆ.
ಈ ಬಗ್ಗೆ ಎಎನ್‌ಐ ಜೊತೆ ಮಾತನಾಡಿರುವ ಅವರು, ವೋಟರ್ ಐಡಿ ಪರಿಶೀಲಿಸಲು ಕೇಳಿದ್ದೇನೆ. ಅದರಲ್ಲಿ ತಪ್ಪೇನಿದೆ. ನಾನು ಕೂಡ ಮಹಿಳೆ ಎಂದು ಪ್ರತಿಕ್ರಿಯಿಸಿದ್ದಾರೆ.
'ನಾನು ಈ ಕ್ಷೇತ್ರದ ಅಭ್ಯರ್ಥಿ. ಅಭ್ಯರ್ಥಿಯಾಗಿ ಮುಖಕ್ಕೆ ಯಾವುದೇ ಮಾಸ್ಕ್ ಇಲ್ಲದೆ ವೋಟರ್ ಐಡಿ ಚೆಕ್ ಮಾಡುವ ಹಕ್ಕು ನನಗಿದೆ. ಅತ್ಯಂತ ವಿನಯಪೂರ್ವಕವಾಗಿ ಅವರನ್ನು ಬುರ್ಖಾ ತೆಗೆದು ವೋಟರ್ ಐಡಿ ಪರಿಶೀಲನೆಗೆ ಸಹಕರಿಸಲು ಮನವಿ ಮಾಡಿದೆ. ಇದನ್ನು ದೊಡ್ಡ ವಿವಾದ ಮಾಡಲು ಯಾರಾದರೂ ಹೊರಟಿದ್ದರೆ, ಅವರು ಭಯಪಟ್ಟಿದ್ದಾರೆ ಎಂದರ್ಥ' ಎಂದು ಹೇಳಿದ್ದಾರೆ.
ಪೊಲೀಸ್ ಅಧಿಕಾರಿಗಳು ಅತ್ಯಂತ ನೀರಸವಾಗಿ ಕೆಲಸ ಮಾಡುತ್ತಿದ್ದು, ಯಾವುದೇ ಪರಿಶೀಲನೆ ನಡೆಸುತ್ತಿಲ್ಲ ಎಂದೂ ಅವರು ದೂರಿದ್ದಾರೆ.
4 ಬಾರಿಯ ಸಂಸದ ಮತ್ತು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿಗೆ ಮಾಧವಿ ಲತಾ ಪ್ರಬಲ ಪೈಪೋಟಿ ಒಡ್ಡಿದ್ದಾರೆ ಎನ್ನುತ್ತಿವೆ ವರದಿಗಳು. ಬಿಆರ್‌ಎಸ್‌ನಿಂದ ಗದ್ದಂ ಶ್ರೀನಿವಾಸ ಯಾದವ್ ಕಣದಲ್ಲಿದ್ದಾರೆ.