ತೆನಾಲಿ: ನಿನ್ನೆ ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಗೆ ಮತದಾನ ನಡೆಯಿತು. ಈ ವೇಳೆ ಆಡಳಿತಾರೂಢ ವೈಎಸ್‌ಆರ್‌ಸಿಪಿ ಶಾಸಕರೊಬ್ಬರು ಮತದಾರನ ಮೇಲೆ ಹಲ್ಲೆ ಮಾಡಿರುವ ಘಟನೆ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದೆ.
ಗುಂಟೂರು ಜಿಲ್ಲೆಯ ತೆನಾಲಿ ವಿಧಾನಸಭಾ ಕ್ಷೇತ್ರದ ವೈಎಸ್‌ಆರ್‌ಸಿಪಿ ಹಾಲಿ ಶಾಸಕ ಎ.
ಶಿವಕುಮಾರ್ ಅವರು ಮತದಾನ ಮಾಡಲು ಬಂದಿದ್ದ ಮತದಾರರೊಬ್ಬರ ಮೇಲೆ ಹಲ್ಲೆ ಮಾಡಿದ್ದಾರೆ. ಜೊತೆಗೆ ಅವರ ಬೆಂಬಲಿಗರೂ ಸಹ ಆ ವ್ಯಕ್ತಿಯ ಮೇಲೆ ಮನಸೋಇಚ್ಚೆ ಹಲ್ಲೆ ಮಾಡಿದ್ದಾರೆ.
ಶಿವಕುಮಾರ್ ಸರದಿ ಸಾಲನ್ನು ದಾಟಿಕೊಂಡು ಮತಗಟ್ಟೆಗೆ ತೆರಳುತ್ತಿದ್ದರು. ಈ ವೇಳೆ ಸರದಿಯಲ್ಲಿದ್ದ ವ್ಯಕ್ತಿ ಶಿವಕುಮಾರ್ ಅವರನ್ನು ಪ್ರಶ್ನಿಸಿದ್ದಾರೆ. ಇದನ್ನು ಕಂಡು ಶಿವ ಕುಮಾರ್ ವ್ಯಕ್ತಿಗೆ ಕಪಾಳಮೋಕ್ಷ ಮಾಡಿದ್ದಾರೆ. ಆ ವ್ಯಕ್ತಿಯೂ ಕೂಡ ಶಿವ ಕುಮಾರ್‌ಗೆ ಪ್ರತಿಯಾಗಿ ಕಪಾಳಕ್ಕೆ ಹೊಡೆದಿದ್ದಾರೆ.
ಬಳಿಕ ಶಿವಕುಮಾರ್ ಬೆಂಬಲಿಗರು ವ್ಯಕ್ತಿಯ ಮೇಲೆ ಮನಸೋಇಚ್ಚೆ ಹಲ್ಲೆ ಮಾಡಿದ್ದಾರೆ. ಈ ಕುರಿತು ಹಲ್ಲೆಗೊಳಗಾದ ವ್ಯಕ್ತಿ ತೆನಾಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಟಿಡಿಪಿ ಕಾರ್ಯಕರ್ತರು ಶಿವ ಕುಮಾರ್ ವಿರುದ್ಧ ಪ್ರತಿಭಟನೆ ನಡೆಸಿದ್ದು ಚುನಾವಣಾ ಆಯೋಗ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಸೋಮವಾರ ಆಂಧ್ರಪ್ರದೇಶದ 175 ವಿಧಾನಸಭಾ ಕ್ಷೇತ್ರಗಳಿಗೆ ಹಾಗೂ 25 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಿತು.