ಮುಂಬೈ: ಮಹಾರಾಷ್ಟ್ರದ ಐಎಎಸ್ ದಂಪತಿಯ ಪುತ್ರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಬೆಳಿಗ್ಗೆ ಮುಂಬೈನಲ್ಲಿ ನಡೆದಿದೆ.
ಮಹಾರಾಷ್ಟ್ರ ಕೇಡರ್ ಹಿರಿಯ ಐಎಎಸ್ ಅಧಿಕಾರಿಗಳಾದ ವಿಕಾಸ್ ರಸ್ತೋಗಿ ಹಾಗೂ ರಾಧಿಕಾ ರಸ್ತೋಗಿ ಅವರ 27 ವರ್ಷದ ಪುತ್ರಿ ಲಿಪಿ ಆತ್ಮಹತ್ಯೆ ಮಾಡಿಕೊಂಡವರು.
ಬೆಳಗಿನ ಜಾವ ದಕ್ಷಿಣ ಮುಂಬೈನ ಸೆಕ್ರೇಟಿರಿಯೇಟ್ ಬಳಿ ಇರುವ ರಸ್ತೋಗಿ ದಂಪತಿ ವಾಸಿಸುತ್ತಿದ್ದ ವಸತಿ ಸಮುಚ್ಚಯದ 10ನೇ ಮಹಡಿಯಿಂದ ಜಿಗಿದು ಲಿಪಿ ಆತ್ಮಹತ್ಯೆಗೆ ಯತ್ನಿಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಸಮೀಪದ ಜಿ.ಟಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಬದುಕುಳಿಯಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಹರಿಯಾಣದ ಸೋನಿಪತ್‌ನಲ್ಲಿ ಎಲ್‌ಎಲ್‌ಬಿ ಓದುತ್ತಿದ್ದ ಲಿಪಿ ಅವರು ಇತ್ತೀಚೆಗೆ ಮಾನಸಿಕವಾಗಿ ನೊಂದಿದ್ದರು ಎನ್ನಲಾಗಿದ್ದು, ಅವರು ಸಾಯುವ ಮುನ್ನ ಮರಣ ಪತ್ರ ಬರೆದಿಟ್ಟಿದ್ದರು. ಅದರಲ್ಲಿ 'ನನ್ನ ಸಾವಿಗೆ ನಾನೇ ಹೊಣೆ, ಯಾರು ಕಾರಣರಲ್ಲ' ಎಂದು ಬರೆದುಕೊಂಡಿದ್ದಾರೆ. ಈ ಕುರಿತು ಪರೇಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಕಾಸ್ ರಸ್ತೋಗಿ ಅವರು ಉನ್ನತ ಶಿಕ್ಷಣ ಇಲಾಖೆಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿದ್ದರೆ, ರಾಧಿಕಾ ರಸ್ತೋಗಿ ಅವರು ಗೃಹ ಇಲಾಖೆಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.
2017ರಲ್ಲೂ ಇಂತಹದೇ ಒಂದು ಘಟನೆ ಮುಂಬೈನಲ್ಲಿ ನಡೆದಿತ್ತು. ಐಎಎಸ್ ದಂಪತಿಯಾದ ಮಿಲಿಂದ್ ಮಹಿಶ್‌ಕರ್ ಹಾಗೂ ಮನಿಶಾ ದಂಪತಿಯ 18 ವರ್ಷದ ಪುತ್ರ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು.