ನವದೆಹಲಿ: ಲೋಕಸಭೆಯಲ್ಲಿ 10 ವರ್ಷಗಳ ತರುವಾಯ ವಿರೋಧ ಪಕ್ಷದ ನಾಯಕ ಇರಲಿದ್ದಾರೆ. ಇಂಡಿಯಾ ಮೈತ್ರಿಕೂಟದ ಸದಸ್ಯ ಬಲ ಗಣನೀಯವಾಗಿ ಏರಿಕೆಯಾಗಿರುವುದು ಇದಕ್ಕೆ ಕಾರಣ.
ಇದರ ಜೊತೆಗೆ ವಿರೋಧಪಕ್ಷಗಳು 18ನೇ ಲೋಕಸಭೆಯಲ್ಲಿ ಡೆಪ್ಯೂಟಿ ಸ್ಪೀಕರ್ ಸ್ಥಾನವು ಭರ್ತಿಯಾಗಲಿದೆ ಎಂಬ ವಿಶ್ವಾಸವನ್ನು ಹೊಂದಿವೆ. ಈ ಸ್ಥಾನವು ಕಳೆದ ಐದು ವರ್ಷಗಳಿಂದ ಖಾಲಿ ಉಳಿದಿದೆ.
17ನೇ ಲೋಕಸಭೆಯ ಅವಧಿಯುದ್ದಕ್ಕೂ ಈ ಸ್ಥಾನ ಭರ್ತಿಯಾಗಿರಲಿಲ್ಲ. ಹೀಗಾಗಿ, ಡೆಪ್ಯೂಟಿ ಸ್ಪೀಕರ್ ಇಲ್ಲದೇ ಇರುವುದು ಇದು ಎರಡನೇ ಬಾರಿ.
'ಇಂಡಿಯಾ' ಮೈತ್ರಿಕೂಟವು ಸಂಸತ್ತಿನಲ್ಲಿ ಅನುಸರಿಸಬೇಕಾದ ಕಾರ್ಯತಂತ್ರ ಕುರಿತಂತೆ ಇನ್ನೂ ಯಾವುದೇ ಚರ್ಚೆ ನಡೆಸಿಲ್ಲ.
ಬಿಜೆಪಿ ನೇತೃತ್ವದ ಸರ್ಕಾರವು ಜನತೆ ಈ ಬಾರಿ ತಿರಸ್ಕರಿಸಿದ್ದಾರೆ. ಅವರು ಕಳೆದ ಐದು ವರ್ಷ ಡೆಪ್ಯೂಟಿ ಸ್ಪೀಕರ್ ಸ್ಥಾನಕ್ಕೆ ಆಯ್ಕೆ ನಡೆಸಲಿಲ್ಲ. ಈ ಚುನಾವಣೆ ಫಲಿತಾಂಶದಿಂದ ಅವರು ಪಾಠ ಕಲಿತಿದ್ದಾರೆ ಎಂಬ ವಿಶ್ವಾಸವಿದೆ ಎಂದು ಟಿಎಂಸಿ ನಾಯಕರೊಬ್ಬರು ಹೇಳಿದರು.
17ನೇ ಲೋಕಸಭೆಯಲ್ಲಿ ಬಿಜೆಪಿಯು 303 ಸ್ಥಾನ ಗೆದ್ದಿದ್ದು, ಸ್ಪಷ್ಟ ಬಹುಮತವನ್ನು ಪಡೆದಿತ್ತು. ಓಂ ಬಿರ್ಲಾ ಅವರು ಸ್ಪೀಕರ್ ಆಗಿ ಆಯ್ಕೆಯಾಗಿದ್ದರು.
ಸಂವಿಧಾನದ ವಿಧಿ 93ರ ಪ್ರಕಾರ, ಲೋಕಸಭೆಯುಎಷ್ಟು ಸಾಧ್ಯವೋ ಅಷ್ಟು ಬೇಗ, ಸ್ಪೀಕರ್ ಮತ್ತು ಡೆಪ್ಯೂಟಿ ಸ್ಪೀಕರ್ ಸ್ಥಾನವನ್ನು ಭರ್ತಿ ಮಾಡಬೇಕು ಎಂದಿದೆ. ಆದರೆ, ಇದಕ್ಕಾಗಿ ಸಂವಿಧಾನದಲ್ಲಿ ಯಾವುದೇ ಕಾಲಮಿತಿಯನ್ನು ಉಲ್ಲೇಖಿಸಿಲ್ಲ.
ಪ್ರಸ್ತುತ, ಈ ವರ್ಷದ ಅಂತ್ಯಕ್ಕೆ ಅವಧಿ ಪೂರೈಸಲಿರುವ ಜಾರ್ಖಂಡ್ ವಿಧಾನಸಭೆಯಲ್ಲಿಯೂ ಡೆಪ್ಯೂಟಿ ಸ್ಫೀಕರ್ ಸ್ಥಾನ ಖಾಲಿ ಉಳಿಸಿಕೊಳ್ಳಲಾಗಿದೆ.
16ನೇ ಲೋಕಸಭೆಯಲ್ಲಿ ಎಐಡಿಎಂಕೆ ಸದಸ್ಯ ಎಂ.ತಂಬಿದೊರೈ ಅವರು ಡೆಪ್ಯೂಟಿ ಸ್ಪೀಕರ್ ಆಗಿ, ಸಾರ್ವತ್ರಿಕ ಚುನಾವಣೆ ಪ್ರಕ್ರಿಯೆ ಪೂರ್ಣಗೊಂಡ 70 ದಿನಗಳ ಬಳಿಕ ಆಯ್ಕೆಯಾಗಿದ್ದರು.